ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕನ್ನಡದ ಖ್ಯಾತ ಹಾಸ್ಯ ನಟ ಸರಿಗಮ ವಿಜಿ ಎಂದೇ ಖ್ಯಾತಿ ಗಳಿಸಿರುವ ನಟ ವಿಜಯಕುಮಾರ್(76) ಬುಧವಾರ ಮುಂಜಾನೆ ನಿಧನರಾಗಿದ್ದಾರೆ. ಶ್ವಾಸಕೋಶದ ಸೋಂಕು ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ನಗರದ ಖಾಸಗಿ ಆಸ್ಪತ್ರೆಯಲ್ಲಿ ಕಳೆದೊಂದು ವಾರದ ಹಿಂದೆ ದಾಖಲಾಗಿದ್ದರು. ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ನಿವಾಸದಲ್ಲಿ ನಾಳೆ ಮುಂಜಾನೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
‘ಬೆಳುವಲದ ಮಡಿಲಲ್ಲಿ’ ಚಿತ್ರದ ಮೂಲಕ ಸಹ ನಿರ್ದೇಶಕ ಹಾಗೂ ನಟನಾಗಿ ಚಿತ್ರರಂಗಕ್ಕೆ ಬಂದರು. ಇದರ ಜೊತೆಗೆ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. ಸಂಸಾರದಲ್ಲಿ ಸರಿಗಮ ಎನ್ನುವ ನಾಟಕ ನಿರ್ದೇಶನ ಮಾಡಿ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನ ಮಾಡಿದರು. ಅದು ತುಂಬಾ ಯಶಸ್ವಿಯಾಯಿತು. ಅಲ್ಲಿಂದ ಸರಿಗಮ ವಿಜಿ ಎಂದೇ ಖ್ಯಾತಿ ಗಳಿಸಿದರು.
ವಿಷ್ಣುವರ್ಧನ್, ಅಂಬರೀಶ್, ಟೈಗರ್ ಪ್ರಭಾಕರ್, ಅನಂತ್ ನಾಗ್, ದೇವರಾಜ್, ಶಂಕರ್ ನಾಗ್, ಕಲ್ಯಾಣ್ ಕುಮಾರ್ ಅವರಿಂದ ಹಿಡಿದು ಶಿವರಾಜಕುಮಾರ್, ಪುನೀತ್ ರಾಜಕುಮಾರ್, ದರ್ಶನ್ ಸೇರಿದಂತೆ ಅನೇಕ ಸ್ಟಾರ್ ನಟನರೊಂದಿಗೆ ಅಭಿನಯಿಸಿದ್ದಾರೆ. 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. 100ಕ್ಕೂ ಹೆಚ್ಚು ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದು, ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದಾರೆ.