ಪ್ರಜಾಸ್ತ್ರ ಸುದ್ದಿ
ಕೊರಾಪುಟ್(Koraput): ವಿಡಿಯೋ ಮಾಡುವ ಹುಚ್ಚು ದುಸ್ಸಾಹಸದಿಂದ ಎಷ್ಟೊಂದು ಜೀವಗಳು ಬಲಿಯಾಗುತ್ತಿವೆ ಎನ್ನುವುದು ಗೊತ್ತಿದ್ದು ಸಹ ಇಂತಹ ಕೆಲಸ ಮಾಡಿ ಪ್ರಾಣ ಕಳೆದುಕೊಳ್ಳುತ್ತಿರುವುದು ನಿಜಕ್ಕೂ ದುರಂತ. 22 ವರ್ಷದ ಯುಟ್ಯೂಬರ್ ಒಬ್ಬ ಭೋರ್ಗರೆವ ನೀರಿನ ನಡುವೆ ನಿಂತು ವಿಡಿಯೋ ಮಾಡುತ್ತಿದ್ದ ವೇಳೆ ಕೊಚ್ಚಿಕೊಂಡು ಹೋಗಿರುವ ಘಟನೆ ಒಡಿಶಾದ ಕೊರಾಪುಟ್ ಜಿಲ್ಲೆಯ ದುದುಮಾ ಜಲಪಾತದಲ್ಲಿ ನಡೆದಿದೆ. ಇದರ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದೆ.
ಬೆರಾಮ್ಪುರ ನಿವಾಸಿಯಾಗಿರುವ 22 ವರ್ಷದ ಸಾಗರ ತುಡು ಅನ್ನೋ ಯುವಕ ಸ್ನೇಹಿತರೊಂದಿಗೆ ಜಲಪಾತಕ್ಕೆ ಬಂದಿದ್ದಾನೆ. ಧುಮ್ಮಿಕ್ಕಿ ಹರಿಯುವ ನೀರಿನ ಮಧ್ಯದಲ್ಲಿ ನಿಂತಿದ್ದಾನೆ. ಇದನ್ನು ಡ್ರೋನ್ ನಲ್ಲಿ ರೆಕಾರ್ಡ್ ಮಾಡಲಾಗುತ್ತಿತ್ತು. ನೀರಿನ ಪ್ರಮಾಣ ಏಕಾಏಕಿ ಹೆಚ್ಚಾಗಿದ್ದು, ಕೊಚ್ಚಿಕೊಂಡು ಹೋಗಿದ್ದಾನೆ. ಮುಂದೆ ಅದು ಬೃಹತ್ ಪ್ರಪಾತ ಇದ್ದು, ಕ್ಷಣಾರ್ಧದಲ್ಲಿ ದುರಂತ ನಡೆದಿದೆ. ಇದು ಮೊಬೈಲ್ ನಲ್ಲಿ ಸೆರೆಯಾಗಿದೆ.