ಪ್ರಜಾಸ್ತ್ರ ಸುದ್ದಿ
ಚೆನ್ನೈ(Chennai): ತಮಿಳು ಚಿತ್ರರಂಗದ ಸ್ಟಾರ್ ನಟ ವಿಜಯ್ ನಟನೆಯ ಕೊನೆಯ ಚಿತ್ರವೆಂದು ಹೇಳಲಾಗುತ್ತಿರುವ ‘ಜನ ನಾಯಗನ್’ಗೆ ಸಂಕಷ್ಟ ಮುಂದುವರೆದಿದೆ. ಈ ಚಿತ್ರಕ್ಕೆ ಯುಎ ಸರ್ಟಿಫಿಕೇಟ್ ಕೊಡುವಂತೆ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಮದ್ರಾಸ್ ಹೈಕೋರ್ಟ್ ವಿಭಾಗೀಯ ಪೀಠ ರದ್ದುಗೊಳಿಸಿದೆ. ಅಲ್ಲದೆ ಮರು ವಿಚಾರಣೆ ನಡೆಸುವಂತೆ ಸೂಚನೆ ನೀಡಿದೆ.
ಜನ್ ನಾಯಗನ್ ಚಿತ್ರಕ್ಕೆ ತಕ್ಷಣವೇ ಸೆನ್ಸಾರ್ ನೀಡುವಂತೆ ಏಕಸದಸ್ಯ ಪೀಠ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಮಂಗಳವಾರ ವಿಭಾಗೀಯ ಪೀಠ ಅಂಗೀಕರಿಸಿದೆ. ಹೀಗಾಗಿ ಸಿನಿಮಾ ಬಿಡುಗಡೆ ಮತ್ತಷ್ಟು ಮುಂದಕ್ಕೆ ಹೋಗಲಿದೆ. ಜನವರಿ 9ರಂದು ಚಿತ್ರ ಬಿಡುಗಡೆಗೆ ಟೀಂ ಸಿದ್ಧವಾಗಿತ್ತು. ವಿಜಯ್ ರಾಜಕೀಯ ಪಕ್ಷ ಸ್ಥಾಪನೆ ಮಾಡಿದ್ದು, ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಹೀಗಾಗಿ ಇದು ಇವರ ಕೊನೆಯ ಸಿನಿಮಾ ಎಂದು ಹೇಳಲಾಗುತ್ತಿದೆ.




