ಪ್ರಜಾಸ್ತ್ರ ಸುದ್ದಿ
ಕರೂರು(Karoru): ತಮಿಳು ಸ್ಟಾರ್ ನಟ ಹಾಗೂ ತಮಿಳಿಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ ವಿಜಯ್ ಶನಿವಾರ ನಡೆಸಿದ ರ್ಯಾಲಿಯ ವೇಳೆ ಬರೋಬ್ಬರಿ 39 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕರೂರು ಜಿಲ್ಲೆಯ ನಡೆಸಿದ ರ್ಯಾಲಿಯಲ್ಲಿ ಇಂತಹದೊಂದು ದುರಂತ ನಡೆದಿದೆ. ಎಲ್ಲಿ ನೋಡಿದರೂ ಶೂ, ಚಪ್ಪಲಿ, ಬಟ್ಟೆಗಳ ರಾಶಿ ಬಿದ್ದಿದೆ. ಈ ದುರಂತದ ಬಗ್ಗೆ ಟಿವಿಕೆ ಪಕ್ಷದವರು ಯಾರೂ ಪ್ರತಿಕ್ರಿಯೆ ನೀಡಿಲ್ಲ.
ವಿಜಯ್ ನೋಡಲು ಅಪಾರ ಸಂಖ್ಯೆಯಲ್ಲಿ ಯುವ ಜನತೆ ಸೇರಿದ್ದರು. ಅವರು ಭಾಷಣದ ವೇಳೆ ವಿದ್ಯುತ್ ಕಡಿತಗೊಂಡಿದೆಯಂತೆ. ಮೈಕ್ರೋ ಫೋನ್ ಮೂಲಕ ಮಾತನಾಡಿದ್ದು ಸರಿಯಾಗಿ ಕೇಳಿಲ್ಲ. ಅವರ ಮಾತುಗಳನ್ನು ಕೇಳಿಸಿಕೊಳ್ಳಲು ಮುಂದೆ ನುಗ್ಗಿದ್ದಾರೆ. ನೂಕು ನುಗ್ಗಲಾಗಿ ಕಳಗೆ ಬಿದ್ದವರ ಮೇಲೆ ತುಳಿದುಕೊಂಡು ಹೋದ ಪರಿಣಾಮ ಇಂತಹದೊಂದು ಅನಾಹುತ ನಡೆದಿದೆ ಎನ್ನಲಾಗುತ್ತಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ ಎಂದು ಗೊತ್ತಿದ್ದರೂ ಆಯೋಜಕರು, ಪೊಲೀಸರು ಸೂಕ್ತ ಭದ್ರತೆ ಒದಗಿಸುವಲ್ಲಿ ವಿಫಲರಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಯುವಕರು ಅತಿ ಉತ್ಸಾಹದಿಂದ ತಮ್ಮ ನೆಚ್ಚಿನ ನಾಯಕನನ್ನು ನೋಡಲು ಬಂದ ಪರಿಣಾಮ ಅನಾಹುತವಾಗಿದೆ.




