ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಸ್ವಚ್ಚತಾ ಹೀ ಸೇವಾ ಅಭಿಯಾನಕ್ಕೆ ಜಿಲ್ಲಾ ಪಂಚಾಯತಿಯ ಆವರಣದಲ್ಲಿ ಮಂಗಳವಾರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ ಅವರು ಚಾಲನೆ ನೀಡಿದರು. ಸ್ವಚ್ಚ ಭಾರತ ಮಿಷನ್ ಯೋಜನೆಯಡಿ ಜಿಲ್ಲಾ ಪಂಚಾಯತನ ಎಲ್ಲಾ ಕೊಠಡಿ, ವಾಹನ ನಿಲುಗಡೆ ಸ್ಥಳ, ಸಾರ್ವಜನಿಕರ ಭೇಟಿ ಸ್ಥಳ ಮತ್ತು ಉದ್ಯಾನ ಸ್ಥಳವು ಸೇರಿದಂತೆ ಒಳಾಂಗಣ ಮತ್ತು ಹೊರ ಆವರಣಗಳನ್ನು ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಈ ವೇಳೆ ಮಾತನಾಡಿದ ಅವರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಕೇಂದ್ರ ಜಲಶಕ್ತಿ ಮಂತ್ರಾಲಯ ಸಹಯೋಗದೊಂದಿಗೆ ಭಾರತದಾದ್ಯಂತ ಹಮ್ಮಿಕೊಂಡಿರುವ ಸ್ವಭಾವ ಸ್ವಚ್ಚತಾ, ಸಂಸ್ಕಾರ ಸ್ವಚ್ಚತಾ ಎಂಬ ಘೋಷವಾಕ್ಯದೊಂದಿಗೆ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 02ರವರೆಗೆ ಎರಡು ವಾರಗಳ ಕಾಲ ಜಿಲ್ಲಾ ಹಾಗೂ ತಾಲೂಕು, ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರತಿ ದಿನವೂ ಸ್ವಚ್ಛತೆ ಎಂಬುದು ನಮ್ಮೆಲ್ಲರ ಆದ್ಯತೆಯಾಗಬೇಕು. ನಗರ ಮತ್ತು ಗ್ರಾಮೀಣ ಭಾಗದಲ್ಲಿಯೂ ಸ್ಚಚ್ಚತಾ ಕಾರ್ಯ ಕೈಗೊಳ್ಳುವ ಮೂಲಕ ಕಚೇರಿಯ ಆವರಣ ಸ್ವಚ್ಛತೆ ಇರುವಂತೆ ನೋಡಿಕೊಳ್ಳಬೇಕು ಎಂದರು.
ನಂತರ ಬಬಲೇಶ್ವರ ತಾಲೂಕಿನ ಹೊನಗನಹಳ್ಳಿ ಗ್ರಾಮ ಪಂಚಾಯತಿಯ ಸರ್ಕಾರಿ ಪ್ರೌಢಶಾಲೆ ಅವರಣದಲ್ಲಿ ಸ್ವಚ್ಛತಾ ಹೀ ಸೇವಾ(Swachhta Hi Seva Campaign) ಅಭಿಯಾನವನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಸ್ವಚ್ಛತೆಗೆ ಮತ್ತು ಆರೋಗ್ಯ ಕಡೆ ಹೆಚ್ಚಿನ ಆದ್ಯತೆ ಕೊಡಬೇಕು. ನೆರೆಹೊರೆ ವಾತಾವರಣದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಶೌಚಾಲಯವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಶೌಚಾಲಯವಿಲ್ಲದ ಕುಟುಂಬಗಳು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ, ಸಹಾಯಧನದಿಂದ ಶೌಚಾಲಯ ಕಟ್ಟಿಸಿ ತಮ್ಮ ಮನೆಯ ಸುತ್ತಲಿನ ಪರಿಸರ ಸ್ವಚ್ಛತೆ ಇರುವಂತೆ ನೋಡಿಕೊಳ್ಳಬೇಕು. ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತೆ ವಹಿಸಬೇಕು ಎಂದು ಸಿಇಒ ಅವರು ಹೇಳಿದರು.
ಸ್ವಚ್ಛತಾ ಹೀ ಸೇವಾ ಅಭಿಯಾನದ ಇಂಗ್ಲಿಷ್ ಅಕ್ಷರದಲ್ಲಿ ಮೂಡಿದ ಸಾಂದರ್ಭಿಕ ಸಂಕೇತ ಎಲ್ಲರ ಗಮನ ಸೆಳೆಯಿತು. ಈ ವೇಳೆ ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಉಪ ಕಾರ್ಯದರ್ಶಿ ಡಾ.ವಿಜಯಕುಮಾರ ಆಜೂರ, ಯೋಜನಾ ನಿರ್ದೇಶಕ ಸಿ.ಬಿ.ದೇವರಮನಿ, ಸಹಾಯಕ ಕಾರ್ಯದರ್ಶಿ ಅನುಸೂಯಾ ಚಲವಾದಿ, ಬಬಲೇಶ್ವರ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ವಿ. ಎಸ್. ಹಿರೇಮಠ, ಗ್ರಾಮ ಪಂಚಾಯತಿ ಅಧ್ಯಕ್ಷ ನಚಿಕೇತನ ಬಿದರಿ, ಉಪಾಧ್ಯಕ್ಷ ರಮೇಶ್ ಕಾಂಬಳೆ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜಯಶ್ರೀ ಪವಾರ, ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯತಿಯ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.