ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಜಿಲ್ಲೆಯಲ್ಲಿ ಇದೇ ಮಾರ್ಚ್ 21ರಿಂದ ಬರುವ ಎಪ್ರಿಲ್ 4 ರವರೆಗೆ ಜರುಗುವ ಎಸ್.ಎಸ್.ಎಲ್.ಸಿ. ಪರೀಕ್ಷೆ-1ಕ್ಕೆ ಸಂಬಂಧಿಸಿದಂತೆ ಪರೀಕ್ಷೆಗಳನ್ನು ಸುಗಮವಾಗಿ ಹಾಗೂ ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು, ಪರೀಕ್ಷೆಯಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ತಡೆಗಟ್ಟಲು ಪರೀಕ್ಷೆಯ ಮೇಲೆ ವೆಬ್ ಕಾಸ್ಟಿಂಗ್ ಮೂಲಕ ನಿಗಾ ಇಡಲು ಎಲ್ಲ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ ಒಟ್ಟು 672 ಪ್ರೌಢಶಾಲೆಗಳ, 22,908 ವಿದ್ಯಾರ್ಥಿಗಳು ಹಾಗೂ 20168 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 42076 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಸರ್ಕಾರಿ-25, ಅನುದಾನಿತ-61, ಅನುದಾನ ರಹಿತ-45 ಸೇರಿದಂತೆ ಒಟ್ಟು 131 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ಜರುಗಲಿವೆ.
ಜಿಲ್ಲೆಯ ಎಲ್ಲ 131 ಪರೀಕ್ಷಾ ಕೇಂದ್ರಗಳ 1974 ಪರೀಕ್ಷಾ ಕೊಠಡಿಗಳಲ್ಲಿ 131 ಕಾರಿಡಾರ್‌ಗಳಲ್ಲಿ ಹಾಗೂ 131 ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರ ಕಾರ್ಯಾಲಯಗಳಲ್ಲಿ ಉತ್ತಮ ಗುಣಮಟ್ಟದ ಸಿ.ಸಿ.ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಹೈ ಸ್ಪೀಡ್ ಇಂಟರ್‌ನೆಟ್ ಸೌಲಭ್ಯ ಕಲ್ಪಿಸಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಯುಪಿಎಸ್ ಬ್ಯಾಟರಿ ಬ್ಯಾಕ್‌ಪ್ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಂದು ಬಿಇಓ ಕಚೇರಿಗಳಲ್ಲಿ ಕನಿಷ್ಠ 10 ಕಂಪ್ಯೂಟರ್‌ಗಳನ್ನು ಅಳವಡಿಸಿ ವೆಬ್‌ಕಾಸ್ಟಿಂಗ್ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಒಟ್ಟು 7 ಶೈಕ್ಷಣಿಕ ತಾಲೂಕು ಕಚೇರಿಗಳಲ್ಲಿ 70 ಕಂಪ್ಯೂಟರ್-ಲ್ಯಾಪಟಾಪ್‌ಗಳ ಮೂಲಕ ಪರೀಕ್ಷಾ ಪ್ರಕ್ರಿಯೆಗಳನ್ನ ವೀಕ್ಷಿಸಲು 7 ಗುಂಪು ಬಿ ದರ್ಜೆ ಅಧಿಕಾರಿಗಳು, 70 ಶಿಕ್ಷಕರು-ಸಿಆರ್‌ಪಿ- ಬಿಆರ್‌ಪಿ ಮತ್ತು ಜನ ತಾಲೂಕು ಪ್ರೊಗ್ರಾಮರ್‌ಗಳು-ತಾಂತ್ರಿಕ ಸಹಾಯಕರುಗಳನ್ನು ನಿಯೋಜಿಸಲಾಗಿದೆ.
ಜಿಲ್ಲೆಯಲ್ಲಿ ಯಾವುದೇ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳು ಇರುವುದಿಲ್ಲ. ಅದ್ಯಾಗೂ 131 ಪರೀಕ್ಷಾ ಕೇಂದ್ರಗಳ ಪೈಕಿ ಭಾಗಶ: ಸಂಪೂರ್ಣವಾಗಿ ಕಂಪೌಂಡ್ ಹೊಂದದೇ ಇರುವ 21 ಪರೀಕ್ಷಾ ಕೇಂದ್ರಗಳಿಗೆ ಬೇಡಿಕೆಯನುಸಾರ ಹೆಚ್ಚುವರಿ ಪೋಲಿಸ್ ಸಿಬ್ಬಂದಿ ನಿಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ. ಪ್ರಶ್ನೆ ಪತ್ರಿಕೆಗಳನ್ನು ಸಾಗಿಸಲು 59 ಮಾರ್ಗಗಳನ್ನು ನಿಗದಿಪಡಿಸಲಾಗಿದ್ದು, ಡಿ.ಎನ್.ದರಬಾರ ಬಾಲಿಕೆಯರ ಪ್ರೌಢಶಾಲೆಯಲ್ಲಿ ಉತ್ತರ ಪತ್ರಿಕೆಗಳನ್ನು ಸಂಗ್ರಹಿಸಿಡಲು ಮತ್ತು ಸ್ಕ್ಯಾನಿಂಗ್ ರೂಮ್ ಸ್ಥಾಪಿಸಲಾಗಿದೆ. ಜಿಲ್ಲಾ ಹಂತದಲ್ಲಿ ವೆಬ್‌ಕಾಸ್ಟಿಂಗ್‌ಗಾಗಿ ಜಿಲ್ಲಾ ಪಂಚಾಯತ್ ಕಚೇರಿಯ ಮಿನಿ ಸಭಾ-ಭವನದಲ್ಲಿ 45 ಕಂಪ್ಯೂಟರ್‌ಗಳು, 1 ಜಿಬಿಪಿಎಸ್ ಸ್ಪೀಡ್ ಇಂಟರ್‌ನೆಟ್ ಸೌಲಭ್ಯ 10 ಕೆ.ವಿ ಸಾಮರ್ಥ್ಯದ ಯುಪಿಎಸ್ ಬ್ಯಾಟರಿ ಬ್ಯಾಕಪ್ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲಾ ಹಂತದ ವೆಬ್ ಕಾಸ್ಟಿಂಗ್ ನಿರ್ವಹಣೆಗೆ 1-ಗ್ರೂಪ್ ಎ ದರ್ಜೆ ಅಧಿಕಾರಿ, 1-ಗ್ರೂಪ್ ಬಿ ಅಧಿಕಾರಿ, 1-ಪ್ರೌಢಶಾಲಾ ಸಹ ಶಿಕ್ಷಕರನ್ನು ಮತ್ತು 2-ತಾಂತ್ರಿಕ ಸಹಾಯಕರು ಸೇರಿದಂತೆ ಒಟ್ಟು 5 ಜನರ ಜಿಲ್ಲಾ ಮಟ್ಟದ 1 ತಂಡವನ್ನು ನಿಯೋಜಿಸಿ ಎಲ್ಲ 45 ಕಂಪ್ಯೂಟರ್‌ಗಳ ವೀಕ್ಷಣೆಗೆ ನಿಯೋಜಿಸಲಾಗಿದೆ. ಒಟ್ಟಾರೆ ಜಿಲ್ಲಾ ಮಟ್ಟದ ವೆಬ್ ಕಾಸ್ಟಿಂಗ್ ನಿರ್ವಹಣೆಗೆ 103 ಅಧಿಕಾರಿ, ಸಿಬ್ಬಂದಿಗಳನ್ನು ನೇಮಿಸಲಾಗಿದೆ.