ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಡೋಣಿ ನದಿ ಪ್ರವಾಹ ಪೀಡಿತ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದ ರಿ.ಸ.ನಂ. 613/*/1 ಸೇರಿದಂತೆ ಪ್ರವಾಹ ಪೀಡಿತ ಎಲ್ಲ ಜಮೀನುಗಳಿಗೆ ನೀಡಿರುವ ಭೂ ಪರಿವರ್ತನೆ ಆದೇಶವನ್ನು ತಕ್ಷಣವೇ ರದ್ದುಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಆನಂದ.ಕೆ ಅವರ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ವಿರುದ್ಧ ಮಾಜಿ ಶಾಸಕ ಶರಣಪ್ಪ ಸುಣಗಾರ ವಾಗ್ದಾಳಿ..
ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಡೋಣಿ ನದಿ ಪ್ರವಾಹ ಪೀಡಿತ ಸಾರವಾಡ ಗ್ರಾಮದ ರಿ.ಸ.ನಂ 613/*/1 ಸೇರಿದಂತೆ ಪ್ರವಾಹ ಪೀಡಿತ ಎಲ್ಲ ಜಮೀನುಗಳಿಗೆ ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆಗೆ ನೀಡಿದ ಅನುಮತಿಯನ್ನು ರದ್ದುಪಡಿಸುವಂತೆ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಸಹಾಯಕ ನಿರ್ದೇಶಕರು ಹಣದ ಆಸೆ, ರಾಜಕೀಯ ಒತ್ತಡಕ್ಕೆ ಮಣಿದು ಪ್ರವಾಹ ಪೀಡಿತ ಪ್ರದೇಶದ ಜಮೀನುಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸುಳ್ಳು ವರದಿ ನೀಡಿ ಸಾರವಾಡ ಗ್ರಾಮದ ಪ್ರವಾಹ ಪೀಡಿತ ಪ್ರದೇಶದ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿರುವುದು ವಿಷಾದನೀಯ ಎಂದು ಕಿಡಿ ಕಾರಿದರು.
ಈ ವೇಳೆ ಹುಣಶ್ಯಾಳದ ಸಂಗನಬಸವ ಮಹಾಸ್ವಾಮಿಗಳು, ತಾಳಿಕೋಟಿ ತಾಲೂಕಾಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ವಿಠ್ಠಲ ಬಿರಾದಾರ, ರೈತ ಹೋರಾಟಗಾರ ಮಲ್ಲಿಕಾರ್ಜುನ ಬಟಗಿ, ಜಿಲ್ಲಾ ಸಂಚಾಲಕ ಪಾಂಡು ಹ್ಯಾಟಿ, ಬಸವರಾಜ ಮಸರಕಲ್ಲ, ಗುರುರಾಜ ಪಡಶೆಟ್ಟಿ, ಲಾಲಸಾಬ್ ಹಳ್ಳೂರ, ಮಲಿಗೆಪ್ಪ ಸಾಸಲಗಿ, ಗುರಲಿಂಗಪ್ಪ ಪಡಸಲಗಿ, ರ‍್ಯಾವಪ್ಪಗೌಡ ಪುಲೇಶಿ, ಮಲ್ಲಪ್ಪ ಪಡಸಲಗಿ, ಗುರುಲಿಂಗಪ್ಪ ಪಡಸಲಗಿ, ಶ್ರೀಶೈಲ, ಬಸವರಾಜ ಹೊಸಳ್ಳಿ, ರಾಮನಗೌಡ ಹಾದಿಮನಿ, ಬಸನಗೌಡ ಬನ್ನಟ್ಟಿ, ಮೈಬೂಬ್ ಅವಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.