ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಪ್ರತಿಯೊಬ್ಬರು ದಯೆ ಗುಣ ಬೆಳೆಸಿಕೊಳ್ಳಬೇಕು ಎಂದು ಬಸವಣ್ಣನವರು ಬುದ್ಧ ಕರುಣೆಯ ಮಹತ್ವವನ್ನು ಸಾರಿದವರು. ಸಮಾಜದ ಅಂಕುಡೊಂಕುಗಳನ್ನು ತಿದ್ದಿದ, ಬಸವಣ್ಣನವರ ತತ್ವಾದರ್ಶಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಾಮಾಜಿಕ ಬದಲಾವಣೆ ತರಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಬುಧವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮAದಿರದಲ್ಲಿ ಬಸವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾತನಾಡಿದ ಅವರು, ಜಾತಿ ವ್ಯವಸ್ಥೆ ಹೊಡೆದೊಡಿಸಲು ಶರಣರು ವಚನಗಳ ಮೂಲಕ ಸಾರಿದ್ದಾರೆ. ೧೨ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವದ ತತ್ವಗಳನ್ನು ಜನಸಾಮಾನ್ಯರಿಗೆ ತಿಳಿಸಿ, ಸಮಸಮಾಜ ಕನಸು ಕಂಡ ಬಸವಣ್ಣನವರು, ಪ್ರತಿಯೊಬ್ಬರು ಕೆಲಸ ಮಾಡಬೇಕು ಎಂಬ ಕಾಯಕವೇ ಕೈಲಾಸ ಎಂದು ಸಾರಿದರು. ಸಂಸ್ಕೃತಿ, ರೀತಿ ನೀತಿಗಳ ಬಗ್ಗೆಯೂ ಅವರ ವಚನಗಳು ಬೆಳಕು ಚೆಲ್ಲುತ್ವವೆ. ಅವರ ಆದರ್ಶ ವಿಚಾರಗಳು, ವಚನಗಳ ಸಾರ ಅರಿತುಕೊಂಡು ನಾವು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಮಂಜುನಾಥ ಜುನಗೊಂಡ ಅವರು, ಸಮ ಸಮಾಜದ ಕನಸು ಕಂಡವರು, ಅಜ್ಞಾನವೆಂಬ ಕತ್ತಲೆ ತೊಲಗಿಸಲು ಬಸವಣ್ಣನವರ ವಚನಗಳು ದೀವಿಗೆಯಾಗಿವೆ. ಸಮಾಜದ ಅಂಕುಡೊಂಕುಗಳ ಹೋಗಲಾಡಿಸಲು ವಚನಗಳ ಮೂಲಕ ಬೆಳಕು ಚೆಲ್ಲಿದ ಅವರು, ಸ್ತ್ರೀ ಸ್ವಾತಂತ್ರ‍್ಯ, ಸಮಾನತೆ, ಭ್ರಾತೃತ್ವ ಸಾರಿದವರು ಎಂದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ ಮಾತನಾಡಿ,ಕಾಯಕವೇ ಕೈಲಾಸ ಎಂದು ಸಾರಿದ ಬಸವಣ್ಣನವರ ಆಚಾರ-ವಿಚಾರಗಳ ಕುರಿತು ಮಕ್ಕಳಿಗೆ ತಿಳಿಸಬೇಕು. ಶರಣ ಸಾಹಿತ್ಯ ಜನಸಾಮಾನ್ಯರ ಸಾಹಿತ್ಯವಾಗಿದೆ. ಕಾಯಕ ಹಾಗೂ ದಾಸೋಹ ತತ್ವಗಳು ಶರಣರ ತತ್ವಗಳನ್ನು ಪರಿಪಾಲಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವಿ.ಸಿ ನಾಗಠಾಣ ಅವರು ಮಾತನಾಡಿದರು. ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಬಿ.ಎಸ್ ರಾಠೋಡ, ಮಹಾನಗರ ಪಾಲಿಕೆ ವಲಯ ಆಯುಕ್ತರಾದ ಮಹಾವೀರ ಬೋರಣ್ಣವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಮಾಲಾರ್ಪಣೆ ಹಾಗೂ ಮೆರವಣಿಗೆಗೆ ಚಾಲನೆ: ಬೆಳಿಗ್ಗೆ ಬಸವೇಶ್ವರ ವೃತ್ತದಲ್ಲಿರುವ ವಿಶ್ವಗುರು ಬಸವಣ್ಣನವರ ಪ್ರತಿಮೆಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ ನಿಂಬರಗಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಇನ್ನು ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದ ಆವರಣದಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರ ಮೆರವಣಿಗೆಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಚಾಲನೆ ನೀಡಿದರು. ಭವ್ಯ ಮೆರವಣಿಗೆಯೂ ವಿವಿಧ ಜಾನಪದ ಕಲಾತಂಡದೊಂದಿಗೆ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದವರೆಗೆ ಸಾಗಿ ಸಮಾವೇಶಗೊಂಡಿತು.