ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಪ್ರತಿ ವರ್ಷದಂತೆ ಈ ವರ್ಷವೂ ಸಹ ಜಿಲ್ಲೆಯಾದ್ಯಂತ ಮಾರ್ಚ್ 13, 14 ರಂದು ಕಾಮದಹನ ಹಾಗೂ ಮಾರ್ಚ್ 15ರಂದು ಬಣ್ಣ ಮತ್ತು ಮಾರ್ಚ್ 19ರಂದು ರಂಗಪಂಚಮಿ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ವಿಶೇಷ ದಂಡಾಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಆದೇಶ ಹೊರಡಿಸಿದ್ದಾರೆ.
ವಿಜಯಪುರ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ್ 01 ರಿಂದ 18ರವರೆಗೆ ಮಹಾನಗರ ಪಾಲಿಕೆಯ ವಲಯ ಆಯುಕ್ತರಾದ ಕೆ.ಎ.ಲೈನ್ ಅವರನ್ನು, ವಿಜಯಪುರ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ್ 19 ರಿಂದ 35ರವರೆಗೆ ಮಹಾನಗರ ಪಾಲಿಕೆಯ ಎಸ್ಟೇಟ್ ಆಪೀಸರ್ ಮಹಾವೀರ ಬೋರಣ್ಣವರ ಅವರನ್ನು ವಿಶೇಷ ದಂಡಾಧಿಕಾರಿಗಳಾಗಿ ನೇಮಕ ಮಾಡಿ ಆದೇಶಿಸಲಾಗಿದೆ. ಉಪ ವಿಭಾಗೀಯ ದಂಡಾಧಿಕಾರಿಗಳು, ಎಲ್ಲ ತಾಲೂಕಿನ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ, ಮುಂಜಾಗ್ರತಾ ಕ್ರಮ ಕೈಗೊಳ್ಳಲು ಆದೇಶದಲ್ಲಿ ಸೂಚಿಸಲಾಗಿದೆ.