ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಧರ್ಮದ ಹೆಸರಿನಲ್ಲಿ ಅಮಾಯಕ ಜೀವಗಳನ್ನು ಬಲಿ ಪಡೆದ ಉಗ್ರರನ್ನು ಸದೆ ಬಡೆಯಲು ನಮ್ಮ ಸೈನಿಕರು ಹೋರಾಟ ನಡೆಸುತ್ತಿದ್ದಾರೆ. ಭಯೋತ್ಪಾದಕರಿಗೆ ಬೆಂಬಲ ನೀಡುವ ಪಾಕಿಸ್ತಾನಕ್ಕೂ ತಕ್ಕ ತಿರುಗೇಟು ನೀಡುತ್ತಿದ್ದಾರೆ. ಹೀಗಿರುವಾಗ ಈ ದೇಶದವಳಾಗಿ ಪಾಕ್ ಪರ ಪೋಸ್ಟ್ ಮಾಡಿದ ವಿದ್ಯಾರ್ಥಿನಿಯೊಬ್ಬಳ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ ಅಮೀನ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಪಾಕಿಸ್ತಾನ ಪರ ಪೋಸ್ಟ್ ಮಾಡಿ ಸಾಮರಸ್ಯ ಕದಡುವ ಕೆಲಸ ಮಾಡಿದ್ದು, ಪ್ರಕರಣ ದಾಖಲಾಗಿದೆ.
ನಗರದ ಅಲ್ ಅಮೀನ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ತಷಾವುದ್ದ ಫಾರೂಖಿ ಶೇಖ್ ಸಾಮಾಜಿಕ ಜಾಲತಾಣದ @hoodyyyyyyy ಅನ್ನೋ ಹೆಸರಿನಲ್ಲಿರುವ ಖಾತೆಯಲ್ಲಿ, ಪಾಕಿಸ್ತಾನ ಹಾಗೂ ನಮ್ಮೆಲ್ಲರನ್ನೂ ಭಾರತದಿಂದ ರಕ್ಷಿಸಲಿ ಎಂದು ಪೋಸ್ಟ್ ಮಾಡಿದ್ದಾಳೆ. ಇದನ್ನು ವಾಟ್ಸಪ್ ಸ್ಟೇಟಸ್ ನಲ್ಲಿಯೂ ಇಟ್ಟುಕೊಂಡಿದ್ದಾಳಂತೆ. ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದೆ. ವಿದ್ಯಾರ್ಥಿನಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ.
ವಿದ್ಯಾರ್ಥಿನಿ ತಷಾವುದ್ದ ಫಾರೂಖಿ ಶೇಖ್ ವಿರುದ್ಧ ಬಿಎನ್ಎಸ್ 152, 197.3(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸಧ್ಯ ಈಕೆ ಮುಂಬೈನಲ್ಲಿದ್ದಾಳೆ ಎಂದು ಹೇಳಲಾಗುತ್ತಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಉಲ್ಟಾ ಹೊಡೆದಿದ್ದು, ನನ್ನ ತಾಯ್ನಾಡು ಭಾರತವಾಗಿದೆ. ನಾನು ಪೋಸ್ಟ್ ಮಾಡಿರುವುದು ನನ್ನ ಮೂರ್ಖತನವಾಗಿದೆ. ಎಲ್ಲರಿಗೂ ಕ್ಷಮೆ ಕೋರುತ್ತೇನೆ. ಇನ್ನೊಮ್ಮೆ ಈ ರೀತಿ ಮಾಡುವುದಿಲ್ಲ. ಜೈ ಹಿಂದ್ ಎಂದು ಪೋಸ್ಟ್ ಮಾಡಿದ್ದಾಳೆ.