ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಸೋಮವಾರ ಹಾಡಹಗಲೇ ನಡುರಸ್ತೆಯಲ್ಲಿ ರೌಡಿಶೀಟರ್ ಸುಶೀಲ್ ಕಾಳೆ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಇಂದು(ಮಂಗಳವಾರ) ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಬಂಧಿಸಲು ಹೋದ ಸಂದರ್ಭದಲ್ಲಿ ಪೊಲೀಸರ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ನೋಡಿದಾಗ ಅವರ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ.
ಗಾಂಧಿ ಚೌಕ್ ಠಾಣೆ ಪಿಎಸ್ಐ ಸಿಪಿಐ ಪ್ರದೀಪ ತಳಕೇರಿ ಗುಂಡು ಹಾರಿಸಿದ್ದಾರೆ. ಆರೋಪಿಗಳಾದ ಆಕಾಶ ಕಲ್ಲವ್ವಗೋಳ, ಸುಭಾಷ ಬಗಲಿ ಎಂಬುವರನ್ನು ವಶಕ್ಕೆ ಪಡೆದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ನಾಲ್ವರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ನಗರದ ಇಟ್ಟಂಗಿಹಾಳ ಬಳಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಮಾತನಾಡಿರುವ ಎಸ್ಪಿ ಲಕ್ಷ್ಮಣ ನಿಂಬರಗಿ, ರೌಡಿಶೀಟರ್ ಹತ್ಯೆಗೆ ಸಂಬಂಧಿಸಿದಂತೆ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಹೋದಾಗ ತಪ್ಪಿಸಿಕೊಂಡು ಹೋಗಲು ನೋಡಿದ್ದಾರೆ. ಬೈಕ್ ನಲ್ಲಿ ತಪ್ಪಿಸಿಕೊಂಡು ಹೋಗಲು ನೋಡಿದಾಗ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ನಿಂತಿಲ್ಲ. ಆಗ ಅವರ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ. ಬೈಕ್ ಗೆ ನಂಬರ್ ಪ್ಲೇಟ್ ಇಲ್ಲ. ಕಳ್ಳತನ ಮಾಡಿದ ಬೈಕ್ ಇರಬಹುದು. ಈ ವೇಳೆ ನಮ್ಮ ಪೊಲೀಸ್ ಸಿಬ್ಬಂದಿಗೆ ಗಾಯವಾಗಿದೆ. ಕಂಟ್ರಿ ಮೇಡ್ ಪಿಸ್ತೂಲ್ ವಶಕ್ಕೆ ಪಡೆಯಲಾಗಿದೆ.