ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಶುಕ್ರವಾರ ಎಸ್ಎಸ್ಎಲ್.ಸಿ ಮೊದಲ ಪರೀಕ್ಷೆ ನಡೆದಿದೆ. 41,276 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 40,187 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 1,089 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ. ಜಿಲ್ಲೆಯ 131 ಪರೀಕ್ಷಾ ಕೇಂದ್ರಗಳಲ್ಲಿ ಪ್ರಥಮ ಭಾಷೆ ಪರೀಕ್ಷೆ ನಡೆದಿದೆ.
ಇನ್ನು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ನಗರದ ವಿ.ಬಿ ದರಬಾರ್ ಶಾಲೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ವಿದ್ಯಾರ್ಥಿಗಳು ಗೊಂದಲ ಮಾಡಿಕೊಳ್ಳದೇ, ಗಲಿಬಿಲಿಗೊಳಗಾಗದೇ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯುವಂತೆ ಆತ್ಮಸ್ಥೈರ್ಯ ತುಂಬಿದರು. ಪರೀಕ್ಷೆಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ನಿರ್ವಹಿಸಬೇಕು. ಪರೀಕ್ಷೆಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಮಹತ್ವದ ಘಟ್ಟವಾಗಿರುವುದರಿಂದ ಪರೀಕ್ಷಾ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳು ಬಾರದಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ದೂರಿಗೆ ಆಸ್ಪದೆ ನೀಡದೇ ಪರೀಕ್ಷಾ ಪರೀಕ್ಷೆಗೆ ನಿಯೋಜಿಸಿದ ಅಧಿಕಾರಿ, ಸಿಬ್ಬಂದಿ ತಮಗೆ ವಹಿಸಿದ ಪರೀಕ್ಷಾ ಕಾರ್ಯಗಳನ್ನು ಅತ್ಯಂತ ಜವಾಬ್ದಾರಿಯಿಂದ ಹಾಗೂ ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದರು.
ಎಸ್ಎಸ್ಎಲ್.ಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಹಾಜರಾತಿ, ಪರೀಕ್ಷಾ ಕೇಂದ್ರಗಳ ಕೊಠಡಿಗಳ ಮಾಹಿತಿ, ವಿದ್ಯಾರ್ಥಿಗಳಿಗೆ ಕಲ್ಪಿಸಿರುವ ಆಸನ ವ್ಯವಸ್ಥೆ, ಪರೀಕ್ಷಾ ಕೇಂದ್ರದಲ್ಲಿ ಮೂಲಭೂತ ಸೌಲಭ್ಯ, ಪರೀಕ್ಷಾ ಕೇಂದ್ರದಲ್ಲಿ ಅಳವಡಿಸಿರುವ ಸಿಸಿ ಟಿವಿ ಮತ್ತು ವೆಬ್‌ಕಾಸ್ಟಿಂಗ್ ಪ್ರಕ್ರಿಯೆಯನ್ನು ಪರಿಶೀಲಿಸಿದರು. ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಭದ್ರತಾ ವ್ಯವಸ್ಥೆ ಕುರಿತು ಪರಿಶೀಲಿಸಿದರು. ಈ ವೇಳೆ ನಿಯೋಜಿತ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.