ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಸ್ವಪಕ್ಷೀಯ ಶಾಸಕರಾದ ಯತ್ನಾಳ್, ರಮೇಶ್ ಜಾರಕಿಹೊಳಿ ಬಹಿರಂಗವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಅವರು ನಾಲಿಗೆ ಬಿಗಿ ಹಿಡಿದು ಮಾತನಾಡಲಿ. ಮುಂದಿನ ದಿನಗಳಲ್ಲಿ ಓಡಾಡಲು ಕಷ್ಟವಾಗುತ್ತಿದೆ ಎಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಗುಡುಗಿದ್ದು, ವಿಜಯೇಂದ್ರ ನೀನು ಇನ್ನೂ ಬಚ್ಚಾ. ನಿಮ್ಮನ ಸಿಎಂ ಮಾಡಲು ನಾನು ತ್ಯಾಗ ಮಾಡಿದ್ದೇನೆ. ರಾಜ್ಯಾಧ್ಯಕ್ಷ ಆಗಲು ನಿನಗೆ ಯೋಗ್ಯತೆ ಇಲ್ಲ. ಯಡಿಯೂರಪ್ಪ ಬಗ್ಗೆ ಈಗಲೂ ಗೌರವ ಇದೆ ಎಂದು ಏಕವಚನದಲ್ಲಿ ಕಿಡಿ ಕಾರಿದ್ದಾರೆ.
ಜಲ್ಲೆಯ ಅಂಕಲಗಿ ಗ್ರಾಮದಲ್ಲಿ ಶನಿವಾರ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಜಯೇಂದ್ರ ನೀನೆ ಡೇಟ್ ಫಿಕ್ಸ್ ಮಾಡು. ಶಿಕಾರಿಪುರದಲ್ಲಿರುವ ನಿನ್ನ ಮನೆ ಮುಂದಿನಿಂದಲೇ ರಾಜ್ಯ ಪ್ರವಾಸ ಶುರು ಮಾಡುತ್ತೇನೆ. ನಾನು ಸವಾಲು ಸ್ವೀಕಾರ ಮಾಡಿರುವೆ ತಾಕತ್ತಿದ್ದರೆ ತಡಿ ನೋಡೋಣ. ನಿನ್ನನ್ನು ಓಡಾಟ ಮಾಡದಂತೆ ಮಾಡುವ ತಾಕತ್ತು ಆ ದೇವರ ಕೊಟ್ಟಿದ್ದಾನೆ. ಯಡಿಯೂರಪ್ಪನವರಿಗೆ ಸಲಹೆ ಕೊಡುತ್ತೇನೆ. ಮಗನ ಬೆನ್ನಿಗೆ ನಿಂತು ಹಾಳಾಗ ಬೇಡಿ. ಒಳ್ಳೆಯ ಅಧ್ಯಕ್ಷರನ್ನು ನೇಮಕ ಮಾಡಲು ಸಹಕಾರ ಕೊಡಿ ಎಂದು ಹೇಳಿದರು.