ಪ್ರಜಾಸ್ತ್ರ ಸುದ್ದಿ
ಧರ್ಮಸ್ಥಳ(Dharmasthala): ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂತು ಹಾಕಲಾಗಿದೆ ಎನ್ನುವ ಆರೋಪಕ್ಕೆ ಸಂಬಂಧಸಿದಂತೆ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ವೀರೇಂದ್ರ ಹೆಗ್ಗಡೆ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಭಕ್ತರನ್ನು ದಾರಿ ತಪ್ಪಿಸಲು ಸಾಮಾಜಿಕ ಮಾಧ್ಯಮಗಳಲ್ಲಿ ಆಧಾರ ರಹಿತ, ಸುಳ್ಳು ಆರೋಪಗಳನ್ನು ಮಾಡಲಾಗಿದೆ. ಕರ್ನಾಟಕ ಸರ್ಕಾರ ಎಸ್ಐಟಿ ರಚಿಸಿರುವುದು ಸ್ವಾಗತ. ಸತ್ಯ ಎಲ್ಲರಿಗೂ ತಿಳಿಯಲಿ ಎಂದಿದ್ದಾರೆ.
ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಈ ರೀತಿ ಹೇಳಿದ್ದಾರೆ. ನಾವು ಎಲ್ಲ ದಾಖಲೆಗಳನ್ನು ತೆರೆದಿಟ್ಟಿದ್ದೇವೆ. ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತೇವೆ. ನಮ್ಮ ಕುಟುಂಬದ ಒಡೆತನದ ಆಸ್ತಿ ಬಹಳ ಕಡಿಮೆಯಿದೆ. ಹೆಚ್ಚಿನದ ಟ್ರಸ್ಟ್ ಆಸ್ತಿಯಿದೆ. ಎಲ್ಲದಕ್ಕೂ ದಾಖಲೆಗಳಿವೆ. 14 ವರ್ಷಗಳಿಂದ ಅಪಪ್ರಚಾರ ಮಾಡುತ್ತಿದ್ದರೂ ಅಚಲವಾಗಿ ಸಮಾಜ ಸೇವೆ ನಡೆಸುತ್ತಿದ್ದೇವೆ. ಧರ್ಮಸ್ಥಳದಲ್ಲಿ ಸಾವನ್ನಪ್ಪಿದವರು ಮೋಕ್ಷ ಹೊಂದುತ್ತಾರೆ ಅನ್ನೋ ನಂಬಿಕೆಯಿದೆ. ಯಾರೇ ಮೃತಪಟ್ಟರೂ ಪಂಚಾಯ್ತಿಗೆ ತಿಳಿಸಿ ಕಾನೂನು ಪ್ರಕಾರ ಕಾರ್ಯ ಮಾಡಿದ್ದೇವೆ. ಈಗ ಮಾಡುತ್ತಿರುವ ಆರೋಪಗಳು ಸುಳ್ಳು ಎಂದು ಹೇಳಿದ್ದಾರೆ.
ಇದು ರಾಜಕೀಯ ವಿಷಯವಲ್ಲ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರು ಇಲ್ಲಿಗೆ ಬಂದಿದ್ದಾರೆ. ದೇವಸ್ಥಾನದ ಮಾನ ಹಾನಿ ಮಾಡಲು ಪ್ರಯತ್ನಿಸುತ್ತಿರುವುದರಿಂದ ಎಲ್ಲ ಪಕ್ಷದವರು ದೇವಸ್ಥಾನ ಪರ ನಿಂತಿದ್ದಾರೆ. ಸಾಮಾಜಿಕ ಮಾಧ್ಯಮ ಪ್ರಬಲವಾಗಿದೆ. ಆದರೆ, ಕೆಲ ಸ್ವಾರ್ಥಿಗಳು ಯುವ ಮನಸ್ಸುಗಳನ್ನು ಕಲುಷಿತಗೊಳಿಸಲು ಬಳಸಿಕೊಂಡಿದ್ದಾರೆ. ಸತ್ಯ ಗೆಲ್ಲುತ್ತದೆ. ಪಿತೂರಿ ಕೊನೆಗೊಳ್ಳುತ್ತದೆ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.