ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaluru): ಅಭಿಮಾನ್ ಸ್ಟುಡಿಯೋದಲ್ಲಿದ್ದ ಸ್ಯಾಂಡಲ್ ವುಡ್ ಹಿರಿಯ ನಟ ಡಾ.ವಿಷ್ಣುವರ್ಧನ್ ಅವರ ಸಮಾಧಿ ತೆರವು ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟು ಹಾಕಿದೆ. ನಿಧನದ ಬಳಿಕವೂ ವಿಷ್ಣುವರ್ಧನ್ ಅವರಿಗೆ ಅನ್ಯಾಯ, ಅಗೌರವಾಗುತ್ತಿದೆ ಎಂದು ಅಭಿಮಾನಿಗಳು ಕಿಡಿ ಕಾರುತ್ತಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಕನ್ನಡದ ಪ್ರತಿಭಾವಂತ ನಟ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಸಮಾಧಿ ನಿರಂತರ ವಿವಾದದಲ್ಲಿ ಸಿಲುಕಿಕೊಂಡಿದ್ದು ನಿಜಕ್ಕೂ ಬೇಸರದ ಸಂಗತಿ ಎಂದಿದ್ದಾರೆ.
ವಿಷ್ಣು ಅವರ ಹಾಗೂ ಹಿರಿಯ ನಟ ಟಿ.ಎನ್ ಬಾಲಕೃಷ್ಣ ಅವರ ಸಮಾಧಿ ಸ್ಥಳಗಳು ಸ್ಮಾರಕಗಳಾಗಿ ಅಭಿಮಾನ್ ಸ್ಟುಡಿಯೋದಲ್ಲಿ ಶೀಘ್ರ ನಿರ್ಮಾಣವಾಗಲಿ. ಅರಣ್ಯ ಭೂಮಿ ಎಂದು ಸಧ್ಯ ಅಭಿಮಾನ್ ಸ್ಟುಡಿಯೋ ಜಾಗವನ್ನು ವಶಪಡಿಸಿಕೊಳ್ಳಲು ಹೊರಟಿರುವ ಸರ್ಕಾರದ ನಿರ್ಧಾರ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಮತ್ತೊಂದು ಗೊಂದಲವಾಗಿ ಮಾರ್ಪಡದಿರಲಿ. ಅಭಿಮಾನಿಗಳ ಮನಸ್ಸನ್ನು ಘಾಸಿಗೊಳಿಸದಂತೆ ಸರ್ಕಾರ ನಡೆದುಕೊಳ್ಳಲಿ ಎಂದು ಬರೆದಿದ್ದಾರೆ.