ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ತಾಲೂಕಿನ ಓತಿಹಾಳ ಗ್ರಾಮದಲ್ಲಿ ಶ್ರೀ ಸಿದ್ದಲಿಂಗ ಮಹಾರಾಜರ 30ನೇ ಜಾತ್ರಾ ಮಹೋತ್ಸವ ಹಾಗೂ ಮಹಿಬೂಸಾಬ್ ಇಮಾಮ್ ಸಾಬ್ ಗುಡ್ಡಳ್ಳಿ ಇವರ ಸ್ಮರಣೆಯ ಅಂಗವಾಗಿ ವಾಲಿಬಾಲ್ ಟೂರ್ನಿ ನಡೆಸಲಾಗಿದೆ. ಓತಿಹಾಳ, ಚಾಂದಕವಠೆ, ಕನ್ನೊಳ್ಳಿ, ಬೂದಿಹಾಳ, ಮಲಘಾಣ, ಚಿಕ್ಕಸಿಂದಗಿ ಸೇರಿದಂತೆ ಇತರೆ ಗ್ರಾಮಗಳಿಂದ 12 ತಂಡಗಳು ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.
ಮಲಘಾಣದ ಲಯನ್ಸ್ ತಂಡ ಟೂರ್ನಿಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ 25 ಸಾವಿರ ನಗದು, ಕಪ್ ಪಡೆಯಿತು. ಓತಿಹಾಳದ ಸಿದ್ದಲಿಂಗೇಶ್ವರ ಕಮಿಟಿ ತಂಡ ದ್ವಿತೀಯ ಸ್ಥಾನ ಪಡೆದಿದ್ದು, 15 ಸಾವಿರ ರೂಪಾಯಿ ನಗದು ಪಡೆಯಿತು. ಮಂಜು ಸಾಹುಕಾರ ತಂಡ ತೃತೀಯ ಸ್ಥಾನ ಪಡೆದಿದ್ದು, 5 ಸಾವಿರ ರೂಪಾಯಿ ನಗದು ಬಹುಮಾನ ಪಡೆಯಿತು.
ದ್ವಿತೀಯ ಸ್ಥಾನ ಪಡೆದ ಓತಿಹಾಳದ ಸಿದ್ದಲಿಂಗೇಶ್ವರ ಕಮಿಟಿ ತಂಡ ಗೆದ್ದ ಬಹುಮಾನ ಮೊತ್ತ 15 ಸಾವಿರ ರೂಪಾಯಿಗಳನ್ನು ಗ್ರಾಮದ ಸರ್ಕಾರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಅಭಿವೃದ್ಧಿಗಾಗಿ ಪ್ರಗತಿ ಸಂಘಕ್ಕೆ ದೇಣಿಕೆ ನೀಡುವ ಮೂಲಕ ಮಾದರಿ ಆಯಿತು. ತಂಡದ ನಾಯಕ ಅಪ್ಪಣ್ಣ ಹೂಗಾರ, ಈರಣ್ಣ ನಾಯ್ಕೋಡಿ, ಪ್ರಕಾಶ ಸುತಾರ, ಇಮಾಮ್ ತಾಳಿಕೋಟಿ, ಅನೀಲ ಚಟ್ಟರಕಿ, ಗುರು ಡಂಬಳ ಅವರಿಗೆ ಶಾಲೆಯ ಪ್ರಗತಿ ಸಂಘದ ಅಧ್ಯಕ್ಷರಾದ ಅಪ್ಪುಗೌಡ ಪಾಟೀಲ, ಕಾರ್ಯದರ್ಶಿ ಸುನೀಲಕುಮಾರ ಮಣೂರು ಸೇರಿ ಸರ್ವಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಪಂದ್ಯಾವಳಿ ಹಾಗೂ ಜಾತ್ರಾ ಮಹೋತ್ಸವಕ್ಕೆ ಶಾಸಕ ಅಶೋಕ ಮನಗೂಳಿ ಉದ್ಘಾಟಿಸಿದ್ದಾರೆ. ಈ ವೇಳೆ ತುಮಕೂರಿನ ಕೆಎಎಸ್ ಅಧಿಕಾರಿ ಸೋಮಪ್ಪ ಕಡಕೋಳ, ಯಾದಗಿರಿಯ ಅರಣ್ಯಾಧಿಕಾರಿ ಸುನೀಲಕುಮಾರ ಮಣೂರ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಶಂಕರಪ್ಪಗೌಡ ಮಕಣಾಪೂರ, ಗ್ರಾಮ ಪಂಚಾಯ್ತಿ ಸದಸ್ಯರಾದ ಜಗದೀಶ ಮಾಳೆಗಾರ, ಹವಳಪ್ಪ ನಾಟೀಕಾರ, ಆಸೀಫ್ ಗೊಜೆಟ್ಟಿ, ಕಾಂಗ್ರೆಸ್ ಯುವ ಮುಖಂಡ ಲಕ್ಷ್ಮಣ ಯಳಮೇಲಿ, ಗಿರೀಶ ಮಲ್ಲೇದ, ಶಿವಾನಂದ ಸಾಲಿಮಠ ಸೇರಿದಂತೆ ಇತರರು ವೇದಿಕೆ ಮೇಲಿದ್ದರು.




