ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಇದೀಗ ಎಲ್ಲೆಡೆ ವಕ್ಫ್ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ನೋಟಿಸ್ ಬರಲಾಗತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ರೈತರು, ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿಂದ ಇದುವರೆಗೂ 124 ನೋಟಿಸ್ ನೀಡಲಾಗಿದೆ. ಈ ಬಗ್ಗೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿರುವ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ, ಜಿಲ್ಲೆಯ ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್ಪೋರ್ಸ್ ಸಮಿತಿಯೊಂದನ್ನು ರಚಿಸಿ, 1964 ರಿಂದ 1974ರವರೆಗಿನ ದಾಖಲೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.
ಇಂಡಿ ತಾಲೂಕಿಗೆ ಸಂಬಂಧಿಸಿದಂತೆ ತಹಶೀಲ್ದಾರರು ನೋಟಿಸ್ ನೀಡದೆಯೇ 41 ಆಸ್ತಿಗಳ ಇಂದೀಕರಣ ಕುರಿತು ಉಪವಿಭಾಗಾಧಿಕಾರಿಗಳು ಸುಮೋಟೋ ಪ್ರಕರಣವೆಂದು ಪರಿಗಣಿಸಿ ಅಗತ್ಯ ಕ್ರಮ ವಹಿಸಬೇಕು ಎಂದಿದ್ದಾರೆ. ಇನ್ನು ಸಿಂದಗಿಯ ವಿರಕ್ತಮಠದ ಆಸ್ತಿ ಸರ್ವೇ ನಂಬರ್ 1029 ಬದಲಿಗೆ 1020 ಆಗಿದ್ದು, ಈ ಕುರಿತು ಅಗತ್ಯ ಕ್ರಮ ವಹಿಸಿ ಸರಿಪಡಿಸುವಂತೆ ಸಚಿವರು ಸೂಚನೆ ನೀಡಿದ್ದಾರೆ. ಯಾರೂ ತಮ್ಮ ಆಸ್ತಿ, ಜಮೀನುಗಳ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ. ಸಾರ್ವಜನಿಕರಿಗೆ ಈ ಬಗ್ಗೆ ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ಹೇಳಿದ್ದಾರೆ.