ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕೇರಳದ ವಯನಾಡಿನಲ್ಲಿ(Wayanadu) ಸಂಭವಿಸಿದ ಭೂಕುಸಿತದಿಂದಾಗಿ 70ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ನೂರಾರು ಜನರು ಕಣ್ಮರೆಯಾಗಿದ್ದಾರೆ. ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ ಹಾನಿಯಾಗಿದೆ. ಸಾವಿರಾರು ಜನರ ಬದುಕು ಬೀದಿಗೆ ಬಂದಿದೆ. ಪ್ರಕೃತಿಯನ್ನು ಅದು ಇರುವಂತೆ ಬಿಟ್ಟು ಖುಷಿ ಪಡುವ ಬದಲು ತನ್ನಂತೆ ಮಾಡಿಕೊಳ್ಳಲು ಹೋಗುವ ಮನುಷ್ಯನ ದುರಾಸೆಗೆ ಆಗಾಗ ಎಚ್ಚರಿಕೆ ಗಂಟೆಯಂತೆ ಇಂತಹ ಘಟನೆಗಳು ನಡೆಯುತ್ತಿವೆ. ಆದರೂ ದೂರಾಸೆಯಿಂದ ಮನುಷ್ಯ ಹೊರ ಬರುತ್ತಿಲ್ಲ.
ವಾಯನಾಡಿನ ದುರಂತದಿಂದಾಗಿ ಕರ್ನಾಟಕದಲ್ಲಿ ಹೈಅಲರ್ಟ್(Highalert) ಪರಿಸ್ಥಿತಿ ಇದೆ. ಚಿಕ್ಕಮಗಳೂರಲ್ಲಿ ನಾಳೆ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಂಡ್ಯದಲ್ಲಿ ಕಾವೇರಿ ತುಂಬಿ ಹರಿಯುತ್ತಿದ್ದು ಪ್ರವಾಹ(flood) ಪರಿಸ್ಥಿತಿ ಮುಂದುವರೆದಿದೆ. ಕೊಡಗು, ಮಡಿಕೇರಿ, ಉಡುಪಿ, ಮಂಗಳೂರು ಭಾಗದಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಇದೆ ರೀತಿ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಭಾಗದಲ್ಲಿಯೂ ಸಹ ವರುಣನ ಬಿರುಸು ಜೋರಾಗಿದೆ. ಹೀಗಾಗಿ ಜನರು ಎಚ್ಚರಿಕೆಯಿಂದ ಇರುವುದು ಬಹಳ ಮುಖ್ಯವಾಗಿದೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ(HDK), ನೆರೆಯ ಕೇರಳದ ವಯನಾಡಿನ ಪಕ್ಕದಲ್ಲಿಯೇ ಕೊಡಗು ಜಿಲ್ಲೆಯೂ ಇದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ನೆರೆ ರಾಜ್ಯಗಳಿಂದ ಆಣೆಕಟ್ಟೆಗಳಿಂದ(Dam) ನೀರನ್ನು ಭಾರಿ ಪ್ರಮಾಣದಲ್ಲಿ ಹೊರ ಬಿಡಲಾಗುತ್ತಿದೆ. ಮಲೆನಾಡು ಭಾಗ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಹಲವು ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ. ಹೀಗಾಗಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸುವ ಜೊತೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಒತ್ತಾಯಿಸಿದ್ದಾರೆ.




