ಪ್ರಜಾಸ್ತ್ರ ಸುದ್ದಿ
ವಾಯನಾಡ(Wayanada): ಭಾರೀ ಪ್ರಮಾಣದ ಭೂಕುಸಿತದಿಂದಾಗಿ(Landslide) ದೇವರ ನಾಡು(God land) ಎಂದೇ ಖ್ಯಾತಿ ಗಳಿಸಿದ ಕೇರಳದಲ್ಲಿ ಏನಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. 300ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. 300ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಇದರ ನಡುವೆ ಗಜಪಡೆ ಅಜ್ಜಿ ಹಾಗೂ ಮೊಮ್ಮಗಳ ರಕ್ಷಣೆಗೆ ನಿಂತ ಮನಮಿಡಿಯುವ ಘಟನೆಯೊಂದು ನಡೆದಿದೆ.
ವಯನಾಡಿನ ಮುಂಡಕೈನ ಟೀ(Tea) ಎಸ್ಟೇಟ್ ದಲ್ಲಿ ಕೆಲಸ ಮಾಡುವ ವೃದ್ಧೆ ಸುಜಾತಾ ಹಾಗೂ ಆಕೆಯ ಮೊಮ್ಮಗಳು ಜುಲೈ 30ರ ರಾತ್ರಿ ನಡೆದ ಭೀಕರ ಭೂಕುಸಿತದಿಂದಾಗಿ ತಪ್ಪಿಸಿಕೊಂಡು ಕಾಡಿನತ್ತ ಓಡಿದ್ದಾರೆ. ಮಗಳು, ಅಳಿಯ ಅಲ್ಲೇ ಉಳಿದಿದ್ದಾರೆ. ಇದೆಲ್ಲದರ ನಡುವೆ ಪ್ರಾಣ ಉಳಿಸಿಕೊಳ್ಳಲು ಕಾಡಿನತ್ತ ಹೋದರೆ ಎದುರಾಗಿದ್ದ ಕುಖ್ಯಾತ ಕೊಂಗನ್ ಅನ್ನೋ ಆನೆ(elephant) ಹಾಗೂ ಇತರ 2 ಆನೆಗಳ ಪಡೆ. ಆಗ ಅಜ್ಜಿ ಹಾಗೂ ಮೊಮ್ಮಗಳಿಗೆ ಮತ್ತೊಮ್ಮೆ ಜೀವ ಬಾಯಿಗೆ ಬಂದಿದೆ. ವೃದ್ಧೆ ಆನೆಗಳ ಹಿಂಡಿಗೆ ಕೈಗೆ ಮುಗಿದು, ಎಲ್ಲವನ್ನೂ ಕಳೆದುಕೊಂಡಿದ್ದೇವೆ. ದಯವಿಟ್ಟು ನಮಗೆ ಏನೂ ಮಾಡಬೇಡಿ ಎಂದು ಕಣ್ಣೀರು ಹಾಕುತ್ತಾ ಬೇಡಿಕೊಂಡಿದ್ದಾರೆ. ಆನೆಗಳಿಗೆ ಆ ಕ್ಷಣ ಏನಾಗಿದೆಯೋ ಗೊತ್ತಿಲ್ಲ. ಅವರಿಬ್ಬರಿಗೂ ಏನೂ ಮಾಡದೆ ಮುಂಜಾನೆ 6 ಗಂಟೆಯ ತನಕ ಅವರೊಂದಿಗೆ ಇದ್ದು ರಕ್ಷಣೆ ಮಾಡಿವೆ. ಮುಂಜಾನೆ ರಕ್ಷಣಾ ಪಡೆ ಬರುತ್ತಿದ್ದಂತೆ ಆನೆಗಳು ಅಲ್ಲಿಂದ ಹೋಗಿವೆ. ಇಡೀ ಘಟನೆಯನ್ನು ವೃದ್ಧೆ ಸುಜಾತಾ ಹೇಳಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಕೊಂಗನ್ ಅನ್ನೋ ಆನೆ ಕೇರಳದಲ್ಲಿ ಸಾಕಷ್ಟು ಕುಖ್ಯಾತಿ ಪಡೆದಿದೆ. ಇದರ ಉಪಟಳಕ್ಕೆ ಅರಣ್ಯ ಸಿಬ್ಬಂದಿಗೆ ಸಾಕು ಸಾಕಾಗಿ ಹೋಗಿದೆ. ಇಂತಹ ಆನೆ ವೃದ್ಧೆ ಹಾಗೂ ಬಾಲಕಿಯನ್ನು ಏನೂ ಮಾಡದೆ ರಕ್ಷಣೆ ಮಾಡಿದ್ದು, ಪ್ರಾಣಿಗಳಲ್ಲಿಯೂ ಮಾನವೀಯತೆ ಇದೆ ಅನ್ನೋದಕ್ಕೆ ಸಾಕ್ಷಿ ಎಂದು ಹೇಳಲಾಗುತ್ತಿದೆ.