ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆ ಸ್ಪರ್ಧೆಗಳ ಬಗ್ಗೆ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗುತ್ತಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯ ಭಾಗವಾಗಿ ಶಿಗ್ಗಾಂವ ಹಾಗೂ ಸಂಡೂರನಲ್ಲಿ ಬಿಜೆಪಿ ಅಭ್ಯರ್ಥಿ ಘೋಷಣೆಯಾಗಿದೆ. ಚನ್ನಪಟ್ಟಣ ಜೆಡಿಎಸ್ ಪಾಲು ಅನ್ನೋದು ಬಹಿರಂಗ ಸತ್ಯ. ಇದಕ್ಕೆ ಬಿಜೆಪಿ ನಾಯಕ ಸಿ.ಪಿ ಯೋಗೇಶ್ವರ್ ಬಂಡಾಯ ಏಳುವ ಸೂಚನೆ ನೀಡಿದ್ದಾರೆ. ಸೋಮವಾರ ತಮ್ಮ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇಂದು ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಸೇರ್ಪಡೆಗೆ ಓಕೆ ಎಂದಿದ್ದಾರೆ ಎನ್ನುವ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, ಅದು ಅವರ ದೊಡ್ಡ ಗುಣ. ನಾನು ಈ ಹಿಂದೆ ಕಾಂಗ್ರೆಸ್ಸಿನಲ್ಲಿದ್ದವನು. ಮುಖ್ಯಮಂತ್ರಿಗಳು ಹಾಗೇ ಹೇಳಿದ್ದಾರೆ ಎಂದರೆ ಸಂತೋಷವಾಗುತ್ತೆ ಎಂದು ಹೇಳುವ ಮೂಲಕ ಬಿಜೆಪಿ ತೊರೆಯುವ ಮುನ್ಸೂಚನೆ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
ಇಂದು ಚನ್ನಪಟ್ಟಣದಲ್ಲಿ ಕಾರ್ಯಕರ್ತರ, ಮುಖಂಡರ ಸಭೆ ನಡೆಸಲಿದ್ದಾರೆ. ಬಿಜೆಪಿ ನಾಯಕರು ಹೆಚ್.ಡಿ ಕುಮಾರಸ್ವಾಮಿಯವರ ನಿರ್ಧಾರದ ಮೇಲೆ ಈ ಕ್ಷೇತ್ರ ಬಿಟ್ಟಿದ್ದಾರೆ. ಇಲ್ಲಿ ನಿಖಿಲ್ ನಿಲ್ಲಿಸಬೇಕು ಎನ್ನುವುದು ಹೆಚ್ಡಿಕೆ ಆಸೆ. ಕಳೆದ ಲೋಕಸಭೆ, ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಮಗನಿಗೆ ರಾಜಕೀಯ ಸ್ಥಾನ ಭದ್ರ ಮಾಡಬೇಕು. ಜೊತೆಗೆ ಡಿ.ಕೆ ಶಿವಕುಮಾರ್ ನಡುವಿನ ಜಿದ್ದಾಜಿದ್ದಿಗೆ ಪಾಠ ಕಲಿಸಬೇಕು ಎನ್ನುವುದು.
ಇನ್ನು ಚನ್ನಪಟ್ಟಣದಲ್ಲಿ ತಕ್ಕ ಸ್ಪರ್ಧಿಯನ್ನು ಹಾಕಿ ಜೆಡಿಎಸ್ ಪಾಳೆಯಕ್ಕೆ ಪಟ್ಟು ಕೊಡಬೇಕು. ರಾಮನಗರ ಜಿಲ್ಲೆಯಲ್ಲಿ ಹಿಡಿತ ಸಾಧಿಸಬೇಕು. ಮುಂದಿನ ಮುಖ್ಯಮಂತ್ರಿ ಹಾದಿಗೆ ಸುಗಮವಾಗಲಿದೆ ಎನ್ನುವುದು ಡಿಸಿಎಂ ಡಿ.ಕೆ ಶಿವಕುಮಾರ್ ಲೆಕ್ಕಾಚಾರ. 2013ರಲ್ಲಿ ಡಿಕೆಶಿಗೆ ಸಿಪಿವೈ ಬೆಂಬಲಿಸಿದಂತೆ ಕಾಂಗ್ರೆಸ್ಸಿಗೆ ಬಂದರೆ ಈ ಬಾರಿ ಸಿಪಿವೈಗೆ ಡಿಕೆಶಿ ಬೆಂಬಲಿಸಿ ಗೆಲ್ಲಿಸಿಕೊಂಡು ಬರುತ್ತಾರ ಇಲ್ಲ ಸಹೋದರ ಡಿ.ಕೆ ಸುರೇಶಗೆ ಟಿಕೆಟ್ ಕೊಡಿಸಿ ಒಂದೇ ಕಲ್ಲಿಗೆ ಮೂರು ಹಕ್ಕಿಗಳನ್ನು ಹೊಡೆಯುವ ಕೆಲಸ ಮಾಡುತ್ತಾರ ಅನ್ನೋದು ಆದಷ್ಟು ಬೇಗ ತಿಳಿಯಲಿದೆ. ಸಿಪಿವೈ ಕೈ ಹಿಡಿಯುತ್ತಾರ ಇಲ್ಲ ಅನ್ನೋದು ಸಹ ಇಂದು ಸಂಜೆ ಅಥವ ಬುಧವಾರ ತಿಳಿಯಲಿದೆ.