ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ರಾಜ್ಯದ ವಿವಿಧ ಜಿಲ್ಲೆಗಳ ಪ್ರಮುಖ ನೀರಾವರಿ ಯೋಜನೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿದರು. ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಬಸವೇಶ್ವರ (ಕೆಂಪವಾಡ), ರಾಮದುರ್ಗಾ ತಾಲೂಕಿನ ವೀರಭದ್ರೇಶ್ವರ ಮತ್ತು ಸಾಲಾಪುರ ಏತ ನೀರಾವರಿ ಯೋಜನೆಗಳ ಪ್ರಗತಿ ಕುರಿತು ಸುವರ್ಣಸೌಧದಲ್ಲಿ ಸಭೆ ನಡೆಸಿದರು.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ (ಕಾಗವಾಡ) 22 ಬರಪೀಡಿತ ಗ್ರಾಮಗಳ 27,462 ಹೆಕ್ಟೇರ್ ಪ್ರದೇಶಗಳಿಗೆ ನೀರು ಒದಗಿಸುವ ಬಸವೇಶ್ವರ ಏತ ನೀರಾವರಿ ಯೋಜನೆಗೆ 2017ರಲ್ಲಿ ಈ ಹಿಂದೆ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಚಾಲನೆ ನೀಡಲಾಗಿತ್ತು. ಈ ಯೋಜನೆಗೆ ಇದುವರೆಗೆ 1,158 ಕೋಟಿ ವೆಚ್ಚ ಮಾಡಲಾಗಿದ್ದು, ಶೇ.90ರಷ್ಟು ಕಾಮಗಾರಿಗಳು ಪೂರ್ಣಗೊಂಡಿದೆ. ಜೂನ್ ಅಂತ್ಯದವರೆಗೆ ಕಾಮಗಾರಿಯನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಯೋಜನೆ ಪೂರ್ಣಗೊಳಿಸಲು 652 ಎಕರೆ ಜಮೀನು ಭೂ ಸ್ವಾಧೀನಪಡಿಸಿಕೊಳ್ಳಬೇಕಾಗಿದ್ದು, ಭೂ ಸ್ವಾಧೀನ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಯೋಜನೆಯನ್ನು ಪೂರ್ಣಗೊಳಿಸಿ ರೈತರ ಹೊಲಗಳಿಗೆ ನೀರು ಹರಿಸಲು ಅಗತ್ಯವಿರುವ ಅನುದಾನವನ್ನು ಒದಗಿಸಲಾಗುವುದು ಎಂದರು. ರಾಮದುರ್ಗಾ ತಾಲೂಕು, ಮುಧೋಳ ತಾಲೂಕು ಹಾಗೂ ಬಾದಾಮಿ ತಾಲೂಕಿನ ಒಟ್ಟು 22 ಗ್ರಾಮಗಳ ಬರಪೀಡಿತ ಗ್ರಾಮಗಳಿಗೆ ನೀರು ಪೂರೈಸುವ ಸಾಲಾಪುರ ಏತ ನೀರಾವರಿ ಯೋಜನೆ ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಇದನ್ನು ಪೂರ್ಣಗೊಳಿಸಲು ಅನುದಾನ ಒದಗಿಸಲಾಗುವುದು. ಇದೇ ರೀತಿ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ ಒಟ್ಟು 34 ಬರಪೀಡಿತ ಗ್ರಾಮಗಳಿಗೆ ನೀರು ಒದಗಿಸುವ ವೀರಭದ್ರೇಶ್ವರ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.




