ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಕಳೆದ ಕೆಲ ವರ್ಷಗಳಿಂದ ಸಿಂದಗಿ ಪುರಸಭೆ(Municipal) ಒಳ್ಳೆಯ ಕೆಲಸಗಳಿಗಿಂತ ಒಂದಲ್ಲ ಒಂದು ಯಡವಟ್ಟು, ಅಕ್ರಮ ಪ್ರಕರಣಗಳಿಂದಲೇ ಚರ್ಚೆಯಲ್ಲಿರುತ್ತೆ. ರಾತ್ರೋರಾತ್ರಿ ಆಸ್ತಿಗಳೇ ಮತ್ತೊಬ್ಬರ ಹೆಸರಿಗೆ ಆಗುತ್ತವೆ. ಸರ್ಕಾರಿ ಯೋಜನೆಗಳ ನಿಜವಾದ ಫಲಾನುಭವಿಗಳು ಬದಲು ಇನ್ಯಾರಿಗೂ ಲಾಭವಾಗುತ್ತೆ. ಇನ್ನು ಇಲ್ಲಿರುವ ಸಿಬ್ಬಂದಿಯಲ್ಲಿ ನಿಜವಾದವರು ಯಾರು? ಸದಸ್ಯರ ಹೆಸರಲ್ಲಿ, ರಾಜಕೀಯ ನಾಯಕರ ಹೆಸರಲ್ಲಿ ಕಾರುಬಾರು ಮಾಡುತ್ತಿರೋದ್ಯಾರು ಒಂದೂ ಗೊತ್ತಾಗಲ್ಲ. ಅಷ್ಟು ಚೆನ್ನಾಗಿ ಬ್ಯಾಲೆನ್ಸ್ ಮಾಡುತ್ತಾರೆ. ಇಷ್ಟೊಂದು ಪೀಠಿಕೆ ಯಾಕಂದರೆ ಆಗಸ್ಟ್ 15ರಂದು ಆಚರಿಸಿದ 78ನೇ ಸ್ವಾತಂತ್ರ್ಯೋತ್ಸವದ ವೇಳೆ ಸರಿಯಾಗಿ ಹಾರಿದ ರಾಷ್ಟ್ರಧ್ವಜ ಸಂಜೆ ಹೊತ್ತಿಗೆ ಉಲ್ಟಾ ಹಾರಾಡಿದೆ. ಊರು ಮಧ್ಯದಲ್ಲಿರುವ ಕಚೇರಿ ಮೇಲೆ ಹಾರಾಡುತ್ತಿದ್ದ ರಾಷ್ಟ್ರಧ್ವಜವನ್ನು(National Flag) ಕೆಳಗೆ ಇಳಿಸಿ ಉಲ್ಟಾ ಹಾರಿಸಿದ್ದು ಯಾರು ಅನ್ನೋದು ಇದುವರೆಗೂ ಗೊತ್ತಾಗಿಲ್ಲ. ಇದು ಸಾರ್ವಜನಿಕರಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಎರಡು ದಿನಗಳ ಹಿಂದೆ ನಾನು ಪೊಲೀಸ್ ಠಾಣೆಗೆ ಹೋಗಿ ಬಂದಿದ್ದೇನೆ. ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ನಮ್ಮ ಕಚೇರಿ ಸಿಬ್ಬಂದಿಯಿಂದಲೂ ಮಾಹಿತಿ ಪಡೆದಿದ್ದಾರೆ. ಆದಷ್ಟು ಬೇಗ ಇದು ಕೊನೆಯ ಹಂತಕ್ಕೆ ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. – ಸುರೇಶ ನಾಯಕ, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ
ಸರಿಯಾಗಿ ಹಾರಿದ ಧ್ವಜ ಉಲ್ಟಾ ಆಗಿದೆ ಅಂದರೆ ಇದು ದೇಶದ್ರೋಹದ ಕೆಲಸ ಎಂದು ವಿವಿಧ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಪೊಲೀಸ್(Police) ದೂರು ನೀಡಲಾಗಿದೆ. ಆದರೆ, ಕೃತ್ಯ ಎಸಗಿದವರು ಯಾರು ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಸುರೇಶ ನಾಯಕ ಅವರು ಉದ್ದೇಶಪೂರ್ವಕವಾಗಿ ಬಾವುಟನ್ನು ಉಲ್ಟಾ ಹಾರಿಸಿದ್ದಾರೆ ಎಂದು ದೂರು ಕೊಟ್ಟಿದ್ದಾರೆ. ಇದರ ಹಿಂದಿನ ಕಾಣದ ಕೈ ಯಾವುದು ಅನ್ನೋದು ಯಾವಾಗ ತಿಳಿಯುತ್ತೆ ಅನ್ನೋ ಪ್ರಶ್ನೆ ಜನರಲ್ಲಿ ಕಾಡುತ್ತಿದೆ.