ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಕೇಳಿ ಬಂದಿರುವ ಅತ್ಯಂತ ಭಯಾನಕ ಆರೋಪವೆಂದರೆ ತಮ್ಮ ವಿರೋಧಿಗಳನ್ನು ಮಟ್ಟ ಹಾಕಲು ಹೆಚ್ಐವಿ ಸೋಂಕಿತರನ್ನು ಹನಿ ಟ್ರ್ಯಾಪ್ ಗೆ ಬಳಸುತ್ತಿದ್ದರು ಎನ್ನುವುದು. ಜೊತೆಗೆ ಅತ್ಯಾಚಾರದ ಆರೋಪವೂ ಇದೆ. ಈ ಸಂಬಂಧ ಎಸ್ಐಟಿ ನಡೆಸಿರುವ ತನಿಖೆಯಲ್ಲಿ ಸ್ಫೋಟಕ ಅಂಶಗಳು ಬೆಳಕಿಗೆ ಬಂದಿವೆ ಎನ್ನಲಾಗುತ್ತಿದೆ. ಸಂತ್ರಸ್ತೆ ಮಾಡಿರುವ ಗಂಭೀರ ಆರೋಪಗಳು ಸತ್ಯಾಂಶವಿದೆ ಎನ್ನುವ ಅಂಶ ತನಿಖೆಯಲ್ಲಿ ಬಯಲಾಗಿದೆಯಂತೆ.
2 ಸಾವಿರಕ್ಕೂ ಹೆಚ್ಚಿನ ಪುಟಗಳ ಚಾರ್ಜ್ ಶೀಟ್ ನ್ನು ತನಿಖಾಧಿಕಾರಿಗಳು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಐಪಿಸಿ 120ಬಿ ಅಪರಾಧಿಕ ಸಂಚು, 506 ಜೀವ ಬೆದರಿಕೆ, 354ಎ ಲೈಂಗಿಕ ಕಿರುಕುಳ, 376(2)ಎನ್ ನಿರಂತರ ಅತ್ಯಾಚಾರ, 354ಸಿ ಅನುಮತಿ ಇಲ್ಲದೆ ಮಹಿಳೆಯ ಅಶ್ಲೀಲ ವಿಡಿಯೋ, 308 ಸಂತ್ರಸ್ತೆಯ ಹತ್ಯೆಯ ಉದ್ದೇಶ, 270 ಅಪಾಯಕಾರಿ ರೋಗ ಹರಡುವಿಕೆ ಸೇರಿದಂತೆ ಹಲವಾರು ಕಾಯ್ದೆಗಳ ಅಡಿಯಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ.
ಸೆಪ್ಟೆಂಬರ್ 18ರಂದು ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು 7 ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ಶಾಸಕ ಮುನಿರತ್ನ, ಶ್ರೀನಿವಾಸ್, ಸುಧಾಕರ್, ಇನ್ಸ್ ಪೆಕ್ಟರ್ ಐಯ್ಯಣ್ಣರೆಡ್ಡಿ ಸೇರಿ 7 ಜನರ ವಿರುದ್ಧ ದೂರು ದಾಖಲಾಗಿದೆ. ಕೋಲಾರದ ಬಳಿಕ ಮುನಿರತ್ನ ಅವರನ್ನು ಬಂಧಿಸಲಾಗಿತ್ತು. ಕೆಲ ದಿನಗಳ ಜೈಲೊಳಗೆ ಇದ್ದ ಇವರು ಜಾಮೀನು ಮೇಲೆ ಹೊರಗೆ ಬಂದಿದ್ದಾರೆ. ಇನ್ನು ಗುತ್ತಿಗೆದಾರರೊಬ್ಬರಿಗೆ ಜೀವ ಬೆದರಿಕೆ, ಜಾತಿ ನಿಂದನೆ ಪ್ರಕರಣವೂ ಮುನಿರತ್ನ ಮೇಲಿದೆ.