ಪ್ರಜಾಸ್ತ್ರ ಸುದ್ದಿ
ಢಾಕಾ(Dhaka): ನೆರೆಯ ಬಾಂಗ್ಲಾದೇಶದಲ್ಲಿ(bangladesh) ನಾಗರಿಕ ಸೇವೆಯಲ್ಲಿನ ಮೀಸಲಾತಿಯ ವಿರುದ್ಧ ಶುರುವಾದ ಪ್ರತಿಭಟನೆ, ದಂಗೆ ಸ್ವರೂಪ ಪಡೆದುಕೊಂಡಿದೆ. ಎಷ್ಟರ ಮಟ್ಟಿಗೆ ವಿದ್ಯಾರ್ಥಿಗಳ ದಂಗೆ ಎದ್ದಿದೆ ಅಂದರೆ ಪ್ರಧಾನಿ ಶೇಖ್ ಹಸೀನಾ(sheikh hasina) ರಾಜೀನಾಮೆ ಕೊಟ್ಟು ತಂಗಿಯೊಂದಿಗೆ ದೇಶ ತೊರೆದು ಓಡಿ ಹೋಗುವಷ್ಟರ ಮಟ್ಟಿಗೆ ಬಂದಿದೆ. ಈ ದಂಗೆಯಲ್ಲಿ 100ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಭರ್ಜರಿ ಬಹುಮತದೊಂದಿಗೆ 4ನೇ ಬಾರಿಗೆ ಪ್ರಧಾನಿಯಾದ ಶೇಖ್ ಹಸೀನಾ ಅವರನ್ನೇ ದೇಶಬಿಟ್ಟು ಓಡಿಸುವಂತೆ ಮಾಡಿರುವ ಹಿಂದಿನ ಶಕ್ತಿ ಯಾವುದು ಎನ್ನುವ ಪ್ರಶ್ನೆ ಎದ್ದಿದೆ.
ಈ ದಂಗೆ ಹಿಂದೆ ನಿಜಕ್ಕೂ ಮೀಸಲಾತಿ ವಿರುದ್ಧದ ಆಕ್ರೋಶ ಇದ್ಯಾ ಎನ್ನುವ ಅನುಮಾನ ಶುರುವಾಗಿದೆ. ಯಾಕಂದರೆ, ಶೇಖ್ ಹಸೀನಾ ದೇಶ ತೊರೆದು ಹೋಗಿರುವುದು ತಿಳಿಯುತ್ತಿದ್ದಂತೆ ಪ್ರತಿಭಟನಾಕಾರರು(protester) ಪ್ರಧಾನಿಯವರ ಅಧಿಕೃತ ಮನೆಗೆ ನುಗ್ಗಿ ಸಿಕ್ಕ ಸಿಕ್ಕ ವಸ್ತುಗಳನ್ನು ದೋಚಿದ್ದಾರೆ. ಅಲ್ಲಿರುವ ವಸ್ತುಗಳನ್ನು ನಾಶ ಮಾಡಿದ್ದಾರೆ. ಗಂಡ್ಮಕ್ಕಳೆ ಶೇಖ್ ಹಸೀನಾ ಅವರ ಸೀರೆ, ಒಳಉಡುಪು ದೋಚಿದ್ದಾರೆ. ಅಲ್ಲಿರುವ ಪಿಠೋಪಕರಣಗಳನ್ನು ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನೆಲ್ಲ ತಗೊಂಡು ಹೋಗಿದ್ದಾರೆ. ಇದೆಲ್ಲದರ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ನಿಜಕ್ಕೂ ಇವರಿಗೆ ತಮ್ಮ ಹೋರಾಟದ ಸ್ಪಷ್ಟ ಉದ್ದೇಶ ಹಾಗೂ ದೇಶದ ಬಗ್ಗೆ ಪರಿಕಲ್ಪನೆ ಇದ್ದಿದ್ದರೆ ಇಷ್ಟೊಂದು ವಿಕೃತಿ ಮೆರೆಯುತ್ತಿರಲಿಲ್ಲ. ಹೆಣ್ಮಕ್ಕಳ ಒಳಉಡುಪನ್ನು ಹಿಡಿದುಕೊಂಡು ಪ್ರದರ್ಶನ ಮಾಡುತ್ತಿರಲಿಲ್ಲ. ಹೀಗಾಗಿ ಶೇಖ್ ಹಸೀನಾ ಅವರ ಸರ್ಕಾರ ಬೀಳಿಸಿ ಅವರೆಂದೂ ರಾಜಕೀಯಕ್ಕೆ ಬರದಂತೆ ಮಾಡಲು ಸಂಚು ರೂಪಿಸಿದ ಪರಿಣಾಮ ಇದೆಲ್ಲ ನಡೆದಿದೆ ಎನ್ನುವ ಗುಮಾನಿ ಎದ್ದಿದೆ. ಕಳೆದ ವರ್ಷ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ಅಲ್ಲಿಯೂ ಇದೆ ರೀತಿ ದಂಗೆ ಎದ್ದು, ಸರ್ಕಾರ ಉರುಳಿದ್ದು ಇನ್ನು ಮಾಸಿಲ್ಲ.