ಪ್ರಜಾಸ್ತ್ರ ವಿಶೇಷ ವರದಿ
ಸಿಂದಗಿ(Sindagi): ಈ ದೇಶದಲ್ಲಿ ಉಳ್ಳವರಿಗೊಂದು, ಆಳುವವರಿಗೊಂದು, ಬಡವರಿಗೊಂದು ಕಾನೂನು ಎಂಬಂತಾಗಿದೆ. ಹೀಗಾಗಿಯೇ ಊರಿನಲ್ಲಿ ಸಣ್ಣದೊಂದು ಬದಲಾವಣೆಯ ಗಾಳಿ ಬೀಸಬೇಕಂದರೂ ಸಾಧ್ಯವಾಗುತ್ತಿಲ್ಲ. ಕಣ್ಣು, ಮೂಗು, ಬಾಯಿ, ಕಿವಿ ಮುಚ್ಚಿಕೊಂಡು ಸುಮ್ಮನಿದ್ದು ಬಿಡಬೇಕು ಎನ್ನುವರ ನಡುವೆ ಒಂದಿಷ್ಟು ಜನರು ಅವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುತ್ತಾರೆ. ಇಷ್ಟೆಲ್ಲ ಪೀಠಿಕೆ ಯಾಕಂದರೆ, ಸಿಂದಗಿ ಪುಟ್ಟಣದ ಹಳೆಯ ಬಜಾರ್ ತನ್ನದೆಯಾದ ಇತಿಹಾಸ ಹೊಂದಿದೆ. ಅದರದೆಯಾದ ಹಿನ್ನಲೆಯಿದೆ. ಇಂತಹ ಹಳೆಯ ಬಜಾರ್ ದಲ್ಲಿ ರಸ್ತೆ ನಿರ್ಮಾಣ ಮಾಡಲು ಮುಂದಾಗಿದ್ದ ಕೆಲಸ ಅರ್ಧಕ್ಕೆ ನಿಂತಿದೆ. ಯಾಕೆ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ದಾಖಲೆಯಲ್ಲಿ ಇರುವುದು 40 ಅಡಿ ರಸ್ತೆನಾ?
ಹಳೆಯ ಬಜಾರ್ ರಸ್ತೆ ಇರುವುದು 40 ಅಡಿ ಎನ್ನುವ ಮಾತಿದೆ. ಅದು ನಿಜಕ್ಕೂ 40 ಅಡಿ ಇದ್ದರೆ ದಾಖಲೆ ಇದ್ದೇ ಇರುತ್ತೆ. ಹೀಗಾಗಿ ಒತ್ತುವರಿ ಮಾಡಿಕೊಂಡಿರುವ ಎಲ್ಲ ಜಾಗವನ್ನು ತೆರವುಗೊಳಿಸಿ 40 ಅಡಿ ಅಲ್ಲ, ಕಡೆ ಪಕ್ಷ ವರ್ಕ್ ಆರ್ಡರ್ ತಂದಿರುವ 30 ಅಡಿ ಅಗಲದ ರಸ್ತೆ, ಎರಡೂ ಬದಿಯಲ್ಲಿ ಚರಂಡಿ ನಿರ್ಮಾಣ ಮಾಡಿ ಎಂದು ಸ್ಥಳೀಯರ ಆಗ್ರಹವಾಗಿದೆ. ಹೀಗಾಗಿ ಒತ್ತುವರಿ ಮಾಡಿಕೊಂಡಿರುವ ಅಂಗಡಿ ಮುಂಗಟ್ಟುಗಳನ್ನು ತಗೆಸಬೇಕು. ಸಾರ್ವಜನಿಕರಿಗೆ ಅನುಕೂಲವಾಗಬೇಕು ಎಂದು ಬರೋಬ್ಬರಿ 400 ಜನರ ಸಹಿ ಹೊಂದಿರುವ ಮನವಿಯನ್ನು ಪುರಸಭೆ ಮುಖ್ಯಾಧಿಕಾರಿ, ಉಪವಿಭಾಗೀಯ ಅಧಿಕಾರಿ, ಜಿಲ್ಲಾಧಿಕಾರಿಗೂ ಕೊಡಲಾಗಿದೆಯಂತೆ. ಇತ್ತೀಚೆಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸಿಂದಗಿಗೆ ಭೇಟಿ ನೀಡಿದಾಗ ಹಳೆಯ ಬಜಾರ್ ಕ್ಕೆ ಬಂದು ಸ್ಥಳ ವೀಕ್ಷಣೆ ಮಾಡಿ, ರಸ್ತೆಯ ಸರ್ವೇ ನಡೆಸಿ ನನಗೆ ಕಳಿಸಿ. ಅಲ್ಲಿಯ ತನಕ ಕಾಮಗಾರಿ ನಿಲ್ಲಿಸುವಂತೆ ಸೂಚಿಸಿದ್ದು. ಅದರಂತೆ ಈಗ ಕೆಲಸ ನಿಂತಿದೆ.
‘ಹಳೆಯ ನಕಾಶೆ ಎಲ್ಲವನ್ನು ಕೊಟ್ಟು ಕಳಿಸಿ. ಎರಡು ಕಡೆ ಚರಂಡಿ ಇಲ್ಲ. ಇದ್ಯಾವ ರೀತಿಯ ಪ್ಲಾನ್, ಇಂಜನಿಯರ್ ಯಾರು ಎಂದು ಪುರಸಭೆ ಮುಖ್ಯಾಧಿಕಾರಿಗೆ ಜಿಲ್ಲಾಧಿಕಾರಿಯವರು ಇತ್ತೀಚೆಗೆ ಬೈದು ಕೆಲಸ ನಿಲ್ಲಿಸಲು ಸೂಚಿಸಿದ್ದಾರೆ. 40 ಅಡಿ ರಸ್ತೆ ಅಂತಾರೆ. ಈಗ 30 ಅಡಿ ರಸ್ತೆಗಾಗಿ ವರ್ಕ್ ಆರ್ಡರ್ ತಂದಿದ್ದಾರೆ. ಸುಮಾರು 1 ಕೋಟಿಗೂ ಹೆಚ್ಚಿನ ಮೊತ್ತದ ಕೆಲಸವಿದು. ಆ 30 ಅಡಿ ರಸ್ತೆ, ಚರಂಡಿನೂ ಮಾಡುತ್ತಿಲ್ಲ. ಊರಲ್ಲಿ ಯಾರೇ ಸತ್ತರೂ ಹಳೆಯ ಬಜಾರ್ ಮಾರ್ಗವಾಗ ಹೋಗುತ್ತೆ. ಈಗ ಅಲ್ಲೊಂದು ಗಾಡಿ ನಿಂತರೆ ರಸ್ತೆ ಬಂದ್ ಆಗುತ್ತೆ. ಹೀಗಾಗಿ ಹಳೆಯ ಬಜಾರ್ ಅಗಲೀಕರಣಕ್ಕಾಗಿ ಸುಮಾರು 400 ಜನರ ಸಹಿಯೊಂದಿಗೆ ಎಲ್ಲ ಅಧಿಕಾರಿಗಳಿಗೆ ಮನವಿ ಕೊಟ್ಟಿದ್ದೇವೆ.’ – ವಿಶ್ವನಾಥ ಲಾಳಸಂಗಿ, ವ್ಯಾಪರಸ್ಥರು
ರಸ್ತೆ ಮಧ್ಯ ಹೆಣವಿಟ್ಟು ಪ್ರತಿಭಟನೆ
ಇಲ್ಲಿನ ಇಕ್ಕಟ್ಟಾದ ರಸ್ತೆಯಿಂದಾಗಿ ಈ ಹಿಂದೆ ರಸ್ತೆ ಮಧ್ಯದಲ್ಲಿ ಹೆಣವಿಟ್ಟು ಪ್ರತಿಭಟನೆ ಮಾಡಿದ ಘಟನೆ ಸಹ ನಡೆದಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಎಲ್ಲ ಸಮಾಜದ ಮಂದಿ ಹಳೆಯ ಬಜಾರ್ ಸುತ್ತಮುತ್ತ ವಾಸಿಸುತ್ತಾರೆ. ಹೀಗಾಗಿ ಯಾರದಾದರೂ ಸಾವಾದರೆ ಸ್ಮಶಾನಕ್ಕೆ ತೆಗೆದುಕೊಂಡು ಹೋಗುವುದು ಇದೆ ಮಾರ್ಗವಾಗಿ. ಹಳೆಯ ಬಜಾರ್ ಕ್ಕೆ ಮತ್ತೆ ತನ್ನದೆಯಾದ ಮೆರಗು ಬರಬೇಕಾದರೆ ಒತ್ತುವರಿಯಾಗಿರುವ ಜಾಗವನ್ನು ತೆರವುಗೊಳಿಸಿ ರಸ್ತೆ, ಚರಂಡಿ ನಿರ್ಮಿಸಿ ಅನ್ನೋ ಆಗ್ರಹ ವ್ಯಕ್ತವಾಗುತ್ತಿದೆ.
‘ರಸ್ತೆ ಅಗಲೀಕರಣ ಮಾಡದೆ ರಸ್ತೆ ಮಾಡಲು ಹೊರಟಿದ್ದಾರೆ. ಎರಡು ಬದಿಯಲ್ಲಿ ಚರಂಡಿ ನಿರ್ಮಿಸುತ್ತಿಲ್ಲ. ಇದರಿಂದಾಗಿ ಎಲ್ಲ ನೀರು ರಸ್ತೆಯ ಮೇಲೆ ಬರುತ್ತೆ. ತಗ್ಗು ಪ್ರದೇಶದಲ್ಲಿರುವ ಓಣಿಯೊಳಗಿನ ಮನೆಗಳಿಗೆ ನುಗ್ಗುತ್ತವೆ. ಎಸ್ಟಿಮೇಟ್ ನಲ್ಲಿ 30 ಅಡಿ ಇದೆ. ಆದರೆ, ಇವರು ಅದನ್ನೂ ಮಾಡುತ್ತಿಲ್ಲ. ಒತ್ತುವರಿಯಾಗಿರುವ ಜಾಗ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ರಸ್ತೆ, ಚರಂಡಿ ನಿರ್ಮಿಸಬೇಕು.’ – ನವೀನ ಗಾಯಕವಾಡ್, ವ್ಯಾಪಾರಸ್ಥರು
ಸಧ್ಯ ರಸ್ತೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿದೆ. ಸರ್ಕಾರಿ ದಾಖಲೆಯಲ್ಲಿ ಎಷ್ಟು ಅಡಿಯ ರಸ್ತೆಯಿದೆ ಅನ್ನೋದನ್ನು ನೋಡಿಕೊಂಡು ಒತ್ತುವರಿಯಾಗಿರುವ ಜಾಗವನ್ನು ತೆರವುಗೊಳಿಸಬೇಕು. ಬಡವರಿಗೊಂದು, ಶ್ರೀಮಂತರಿಗೊಂದು ಮಾಡಬಾರದು. ಸಾರ್ವಜನಿಕರಿಗೆ ಒಳ್ಳೆಯದಾಗಬೇಕು. ಪ್ರತಿಯೊಂದು ವಾಹನ, ಜನರ ಸಂಚಾರಕ್ಕೆ ಅನುಕೂಲವಾಗಬೇಕು. ಇದರ ಹೊರತು ಪಡಿಸಿ ಯಾವು ಉದ್ದೇಶವೂ ಇದರಲ್ಲಿ ಇಲ್ಲ ಅನ್ನೋದು ರಸ್ತೆ ಅಗಲೀಕರಣ ಆಗಬೇಕು ಎನ್ನುವರ ಅಭಿಪ್ರಾಯ.
‘ಯಾವುದೇ ಪ್ಲಾನ್ ರೀತಿ ರಸ್ತೆ ನಿರ್ಮಾಣ ಮಾಡುತ್ತಿಲ್ಲ. ಎಸ್ಎಫ್ ಸಿ ಫಂಡ್ ನಲ್ಲಿ 30 ಅಡಿ ರಸ್ತೆ ಎಂದು ತೆಗೆದುಕೊಂಡು ಬಂದಿದ್ದಾರೆ. ಆದರೆ, ಯಾವುದೇ ಅತಿಕ್ರಮಣ ಜಾಗ ತೆರವುಗೊಳಿಸದೆ, ಎರಡೂ ಕಡೆ ಚರಂಡಿ ಮಾಡದೆ ರಸ್ತೆ ಮಾಡಲು ಹೊರಟಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತೆ. ಹಳೆಯ ಓಣಿಯಲ್ಲಿರುವ ಮನೆಯೊಳಗೆ ನೀರು ಹೋಗುತ್ತವೆ. ಹೀಗಾಗಿ ಪುರಸಭೆ ಮುಖ್ಯಾಧಿಕಾರಿಯವರಿಗೆ ಮಾಹಿತಿ ಹಕ್ಕು ಕಾಯ್ದೆ ಅಡಿ ಮನವಿ ಸಲ್ಲಿಸಿದರೂ ರಸ್ತೆಯ ಬಗ್ಗೆ ಮಾಹಿತಿ ಕೊಡುತ್ತಿಲ್ಲ.’ – ಮಲ್ಲಿಕಾರ್ಜುನ ಪಡಶೆಟ್ಟಿ, ವಕೀಲರು
ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿಯವರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದಿಷ್ಟು..
‘ನಾನು ಹೊಸದಾಗಿ ಇಲ್ಲಿಗೆ ಬಂದಿದ್ದೇನೆ. ಜಿಲ್ಲಾಧಿಕಾರಿಗಳು ಸರ್ವೇ ಮಾಡಿಸಲು ಹೇಳಿದ್ದಾರೆ. ಸರ್ವೇ ಆದ ನಂತರ ರಸ್ತೆ ಎಷ್ಟಿದೆ ಅನ್ನೋದು ತಿಳಿಯಲಿದೆ.’ – ಸುರೇಶ ನಾಯಕ, ಮುಖ್ಯಾಧಿಕಾರಿಗಳು, ಪುರಸಭೆ, ಸಿಂದಗಿ
ಹಳೆಯ ಬಜಾರ್ ರಸ್ತೆ ಅತಿಕ್ರಮಣ ತೆರವು ಮಾಡಿದ ಬಳಿಕ ರಸ್ತೆ, ಚರಂಡಿ ಮಾಡಿ ಎಂದು ಹೇಳುತ್ತಿರುವವರು ಇಷ್ಟಕ್ಕೆ ಬಿಡುವುದಿಲ್ಲ ಎನ್ನುವ ಮಾತುಗಳನ್ನು ಹೇಳುತ್ತಿದ್ದಾರೆ. ಎಲ್ಲರ ಹಿತದೃಷ್ಟಿಯಿಂದ ಅತಿಕ್ರಮಣಗೊಂಡಿರುವ ಜಾಗವನ್ನು ತೆರವುಗೊಳಿಸಿ ರಸ್ತೆ, ಚರಂಡಿಯಾಗಬೇಕು. ಇಲ್ಲದೆ ಹೋದರೆ ಕಾನೂನಿನ ಮೊರೆ ಹೋಗಲು ಸಿದ್ಧ ಎನ್ನುವ ಮಾತುಗಳನ್ನು ಹೇಳುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.