ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ನಕ್ಸಲ್ ನಾಯಕ ವಿಕ್ರಂಗೌಡ ಎನ್ ಕೌಂಟರ್ ಬಗ್ಗೆ ಹಲವು ಚರ್ಚೆಗಳು ನಡೆದಿವೆ. ಪ್ರಗತಿಪರ ಚಿಂತಕರು ಈ ಬಗ್ಗೆ ಕೆಲವೊಂದು ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಬಗ್ಗೆ ಬುಧವಾರ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಶರಣಾಗುವಂತೆ ವಿಕ್ರಂಗೌಡಗೆ ಆದೇಶ ನೀಡಲಾಗಿತ್ತು. ಆದರೆ, ಶರಣಾಗಿರಲಿಲ್ಲ. ಅವರನ್ನು ಹಿಡಿದುಕೊಟ್ಟವರಿಗೆ ಕೇರಳ ಸರ್ಕಾರ 25 ಲಕ್ಷ, ಕರ್ನಾಟಕ ಸರ್ಕಾರ 5 ಲಕ್ಷ ರೂಪಾಯಿ ಘೋಷಿಸಿತ್ತು ಎಂದರು.
ಸೋಮವಾರ ನಡೆದ ಎನ್ ಕೌಂಟರ್ ನಲ್ಲಿ ವಿಕ್ರಂಗೌಡನ ಹತ್ಯೆಯಾಗಿದೆ. ಬುಧವಾರ ಆತನ ಅಂತ್ಯಕ್ರಿಯೆ ನಡೆಯಿತು. ಆತನ ಬದುಕಿನಲ್ಲಿ ಪೊಲೀಸರ ಕಿರುಕುಳ ಹಾಗೂ ವ್ಯವಸ್ಥೆ ವಿರುದ್ಧದ ಆಕ್ರೋಶದಿಂದಾಗಿ ಇಂತಹ ಹಾದಿ ತುಳಿದಿದ್ದ ಎಂದು ಹೇಳಲಾಗುತ್ತಿದೆ. ಮಣಿಪಾಲ್ ಕೆಎಂಸಿ ಆಸ್ಪತ್ರೆಯಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ಪೋಸ್ಟ್ ಮಾರ್ಟಮ್ ನಡೆಸಲಾಗಿದೆ. ನಂತರ ಮೃತದೇಹವನ್ನು ಸಹೋದರ ಸುರೇಶಗೌಡ, ಸಹೋದರಿ ಸುಗಣ ಅವರಿಗೆ ಹಸ್ತಾಂತರಿಸಲಾಯಿತು. ಬುಧವಾರ ನಾಡ್ಪಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೂಡ್ಲು ಪ್ರದೇಶದಲ್ಲಿರುವ ಮೂಲ ಮನೆಯ ಹತ್ತಿರ ವಿಕ್ರಂಗೌಡ ಅಂತ್ಯಕ್ರಿಯೆ ನಡೆಯಿತು.