ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಡಿಸೆಂಬರ್ 7, 2022ರಂದು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಕ್ರಾಸ್ ಹತ್ತಿರ ಕಾರು ಹಾಗೂ ಕಂಟೇನರ್ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಕಾರಿನಲ್ಲಿದ್ದ ಅಂದಿನ ಸಿಂದಗಿ ಸಿಪಿಐ(CPI) ರವಿ ಉಕ್ಕುಂದ ಹಾಗೂ ಪತ್ನಿ ಮಧು ಮೃತಪಟ್ಟಿದ್ದರು. ಇದರಿಂದಾಗಿ ಸಿಂದಗಿ ತಾಲೂಕಿನ ಜನರು ಸಾಕಷ್ಟು ಮರುಕ ಪಟ್ಟಿದ್ದರು. ಈ ಪ್ರಕರಣದಲ್ಲಿ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅದೇನಪ್ಪ ಅಂದರೆ ತೆಲಂಗಾಣ ಮೂಲದ ಕಂಟೇನರ್(Container Lorry) ಮಾಲೀಕ ಪೊಲೀಸ್ ವಶದಲ್ಲಿ ಗಾಡಿಯನ್ನು ಬಿಡಿಸಿಕೊಂಡು ಹೋಗಲು ಗೋಲ್ಮಾಲ್ ಮಾಡಿರುವುದು ಬೆಳಕಿಗೆ ಬಂದಿದೆ. ಕಟೇನರ್ ನ ವಿಮಾ ಕಂಪನಿಯ ನಕಲಿ ದಾಖಲೆಗಳನ್ನು ತೋರಿಸಿ ಗಾಡಿ ಬಿಡಿಸಿಕೊಂಡು ಹೋಗಿರುವುದು ಕಂಪನಿಯ ದಾಖಲೆಗಳ ಪರಿಶೀಲನೆಯಿಂದ ತಿಳಿದು ಬಂದಿದೆ.
ತೆಲಂಗಾಣ ಮೂಲದ ಕಂಟೇನರ್ ಮಾಲೀಕ ರವಿಕುಮಾರ್ ರೆಡ್ಡಿ ಹಾಗೂ ವಾಹನ ಬಿಡಿಸಿಕೊಂಡು ಹೋದ ಕಲಬುರಗಿ ಮೂಲದ ಶಂಕರ ಭೀಮಶ್ಯಾ ಹಾಗೂ ಇತರರ ವಿರುದ್ಧ ನೆಲೋಗಿ ಪೊಲೀಸ್ ಠಾಣೆಯಲ್ಲಿ ಇದೀಗ ದೂರು ದಾಖಲಾಗಿದೆ. ಟಿಎಸ್ 07, ಯುಎಲ್ 1920 ನಂಬರ್ ಹೊಂದಿರುವ ಕಂಟೇನರ್ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದನ್ನು ಬಿಡಿಸಿಕೊಳ್ಳಲು ಲಾರಿ ಮಾಲೀಕ ರವಿಕುಮಾರ್ ರೆಡ್ಡಿ ತನ್ನ ಬಳಿಯಿದ್ದ ಮತ್ತೊಂದು ಲಾರಿಯ ವಿಮೆಯ(Insurance)ದಾಖಲೆಗಳನ್ನು ತಿದ್ದಿ ಪೊಲೀಸರಿಗೆ ಅದನ್ನು ತೋರಿಸಿ ಬಾಂಡ್ ಮೇಲೆ ಗಾಡಿ ಬಿಸಿಕೊಂಡು ಹೋಗಿದ್ದಾರೆ. ಅಸಲಿಗೆ ಪೊಲೀಸ್ ವಶದಲ್ಲಿದ್ದ ಲಾರಿಗೆ ವಿಮೆ ಇರಲಿಲ್ಲ ಎಂದು ಪೊಲೀಸರು ದಾಖಲಿಸಿಕೊಂಡಿರುವ ದೂರಿನಲ್ಲಿ ತಿಳಿದು ಬಂದಿದೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಡಿವೈಎಸ್ಪಿ ತಿಳಿಸಿದ್ದಾರೆ.
ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಅರಳಿಕಟ್ಟೆ ಗ್ರಾಮದಲ್ಲಿ ರವಿ ಉಕ್ಕುಂದ ಅಂದು ಸಿಂದಗಿ ಸಿಪಿಐ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕುಟುಂಬ ಸಮೇತ ಕಲಬುರಗಿಗೆ ಅಂದು ಕೆಎ 36 ಎನ್ 3280 ನಂಬರ್ ನ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಹೊರಟಿದ್ದರು. ದುರಾದೃಷ್ಟವಶಾತ್ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಕಂಟೇನರ್ ಲಾರಿಗೆ ಹಿಂಬದಿಯಿಂದ ಡಿಕ್ಕಿಯಾಗಿ(Accident) ಸ್ಥಳದಲ್ಲಿಯೇ ರವಿ ಉಕ್ಕುಂದ ಹಾಗೂ ಪತ್ನಿ ಮಧು ಮೃತಪಟ್ಟರು.