ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ಸಧ್ಯ ಅನಾರೋಗ್ಯದ ಹಿನ್ನಲೆಯಲ್ಲಿ ಮಧ್ಯಂತರ ಜಾಮೀನು ಪಡೆದು ಹೊರಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ತನಿಖಾಧಿಕಾರಿಗಳು ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಹೋಗಲು ನಿರ್ಧರಿಸಿದ್ದಾರೆ. ಇದಕ್ಕೆ ಗೃಹ ಇಲಾಖೆಯ ಅನುಮತಿ ಬೇಕಿದೆ. ಆದರೆ, ಇಲಾಖೆಯಿಂದ ಅನುಮತಿ ಸಿಗುವುದು ವಿಳಂಬವಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಜಿ.ಪರಮೇಶ್ವರ್, ಅವಕಾಶವಿದ್ದರೆ ಮೇಲ್ಮನವಿ ಸಲ್ಲಿಸಿ ಎಂದು ನಾನು ಹೇಳಿದ್ದೇನೆ. ಇಲ್ಲಿ ಯಾವುದೇ ವಿಳಂಬವಾಗಿಲ್ಲ. ಯಾವಾಗ ಮನವಿ ಸಲ್ಲಿಸಬೇಕು ಎಂದು ಗೃಹ ಇಲಾಖೆಯ ಕಾರ್ಯದರ್ಶಿಗಳು ನಿರ್ಧರಿಸುತ್ತಾರೆ. ಯಾಕಂದರೆ, ಈ ರೀತಿಯ ಪ್ರಕರಣಗಳಲ್ಲಿ ನಿಯಮಗಳ ಪ್ರಕಾರಣವೇ ನಡೆಯಬೇಕುತ್ತೆ ಎಂದು ಹೇಳಿದ್ದಾರೆ.
ನಟ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು, ಬಳ್ಳಾರಿ ಜೈಲು ಸೇರಿ 140ಕ್ಕೂ ಹೆಚ್ಚಿನ ದಿನಗಳು ನ್ಯಾಯಾಂಗ ಬಂಧನದಲ್ಲಿದ್ದರು. ಜಾಮೀನಿಗಾಗಿ ಬೆಂಗಳೂರಿನ ಎಸಿಎಂಎಂ ಕೋರ್ಟ್ ನಲ್ಲಿ ವಾದ, ಪ್ರತಿವಾದ ನಡೆಯಿತು. ಆದರೆ, ಜಾಮೀನು ನಿರಾಕರಿಸಲಾಯಿತು. ಆಗ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ಅಲ್ಲಿಯೂ ವಾದ, ಪ್ರತಿವಾದ ನಡೆಯಿತು. ಅನಾರೋಗ್ಯದ ಕಾರಣಕ್ಕೆ 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಲಾಗಿದೆ. ನಟ ದರ್ಶನ್ ಪರ ಸಿ.ವಿ ನಾಗೇಶ್ ವಕಾಲತ್ತು ವಹಿಸಿದ್ದಾರೆ. ತನಿಖಾಧಿಕಾರ ಪರ ಪ್ರಸನ್ನಕುಮಾರ್ ಅವರು ವಾದ ಮಂಡಿಸುತ್ತಿದ್ದಾರೆ. ದರ್ಶನ್ ಪ್ರಭಾವಿ ವ್ಯಕ್ತಿಯಿದ್ದು, ಹೊರಗೆ ಇದ್ದರೆ ತನಿಖೆಗೆ ತೊಂದರೆಯಾಗುತ್ತದೆ ಎನ್ನುವುದು ತನಿಖಾಧಿಕಾರಿಗಳ ವಾದವಾಗಿದೆ.