ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ಸಿನವರಿಗೆ ಮಾತ್ರ ನೀಡುತ್ತಿಲ್ಲ. ಎಲ್ಲರಿಗೂ ನೀಡುತ್ತಿದ್ದೇವೆ. ಇದರ ಪ್ರಯೋಜನ ಪಡೆಯುವವರು ಸಹ ಯೋಜನೆ ಬಗ್ಗೆ ಟೀಕಿಸುತ್ತಾರೆ. ಅಭಿವೃದ್ಧಿ ಆಗಿಲ್ಲ ಅಂತಾರೆ. ನಮ್ಮವರೆ ಆಗಾಗ ನನ್ನನ್ನು ಭೇಟಿಯಾಗಿ ಈ ರೀತಿಯಾಗಿ ಹೇಳುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು, ಸರ್ಕಾರ ಉಚಿತ ಗ್ಯಾರಂಟಿಗಳನ್ನು ಸಾಮಾನ್ಯ ಜನರಿಗಾಗಿ ಮಾಡಿದೆ. ಎಲ್ಲ ಪಕ್ಷದವರು ಪ್ರಯೋಜನ ಪಡೆಯುತ್ತಾರೆ. ರಾಜ್ಯ ಬರ್ಬಾದ್ ಆಗಿದೆ ಎಂದು ಟೀಕಿಸುತ್ತಾರೆ ಎಂದರು.
ಗ್ಯಾರಂಟಿಗಳಿಂದ ಸರ್ಕಾರ ದಿವಾಳಿಯಾಗಿದೆ ಎನ್ನುವವರಿಗೆ ಶಾಸಕರಿಗೆ 50 ಕೋಟಿ ರೂಪಾಯಿ ಅನುದಾನ ಹೇಗೆ ಬಿಡುಗಡೆಯಾಗಿದೆ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ದುಡ್ಡಿಗೆ ಬರ ಇರುವುದಿಲ್ಲ. ಲಕ್ಷ್ಮಿ ಕಾಲು ಕುಂಟಿಕೊಂಡು ಬಿದ್ದಿರುತ್ತಾಳೆ. ಆದರೆ, ಬಿಜೆಪಿ ಅಧಿಕಾರದಲ್ಲಿದ್ದಾಗ ಹಣ ಇರುವುದಿಲ್ಲ. ಕೆಲ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಗ್ಯಾರಂಟಿ ಜಾರಿಗೆ ತರಲಾಗಿದೆ. ಆದರೆ, ಸರಿಯಾಗಿ ಅನುಷ್ಟಾನವಾಗಿಲ್ಲ. ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಸೋತಿರಬಹುದು. ಇನ್ನು 10 ಸ್ಥಾನ ಜನರು ನಮಗೆ ಕೊಟ್ಟಿದ್ದರೆ ಮೋದಿ ಎಲ್ಲಿ ಅಧಿಕಾರಕ್ಕೆ ಬರುತ್ತಿದ್ದರು ಎಂದು ಕೇಳಿದರು.