ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರಾಜ್ಯ ರಾಜಕೀಯದಲ್ಲಿ ಒಳ ಜಗಳಗಳು ಹೆಚ್ಚಾಗುತ್ತಿವೆ. ಆಡಳಿತರೂಢ ಕಾಂಗ್ರೆಸ್ ನಲ್ಲೂ ಜಗಳ, ವಿಪಕ್ಷ ಬಿಜೆಪಿಯಲ್ಲೂ ಜಗಳ. ಬಹಿರಂಗ ವಾಗ್ದಾಳಿ ನಡುವೆ ಕೋರ್ ಕಮಿಟಿ ಸಭೆಯಲ್ಲೂ ನಾಯಕರುಗಳ ನಡುವೆ ವಾಗ್ವಾದಗಳು ನಡೆಯುತ್ತಿವೆ. ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲಾ ಮುಂದೆಯೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಮಾಜಿ ಡಿಸಿಎಂ ಅಶ್ವತ್ಥನಾರಾಯಣ ನಡುವೆ ಮಾತಿನ ಚಕಮಕಿ ನಡೆದಿದೆ. ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರ ಸಂಬಂಧ ಹಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನುವುದು ತಿಳಿದು ಬಂದಿದೆ.
ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರವಾಗಿ ಅಶ್ವತ್ಥನಾರಾಯಣ ಹಾಗೂ ವಿಜಯೇಂದ್ರ ನಡುವೆ ಮಾತಿನ ಚಕಮಕಿ ನಡೆದಿದೆ. ಇವರ ಜಗಳದಲ್ಲಿ ಆರ್.ಅಶೋಕ್ ಎಂಟ್ರಿಯಾಗಿದೆ. ತಮ್ಮ ಬೆಂಬಲಿಗೆ ಜಿಲ್ಲಾಧ್ಯಕ್ಷ ಸ್ಥಾನ ಕೊಡಬೇಕು. ಎಲ್ಲವೂ ವಿಜಯೇಂದ್ರ ಹೇಳಿದವರಿಗೆ ಕೊಡುವುದಾದರೆ ಹೇಗೆ ಎಂದು ಕಿಡಿ ಕಾರಿದ್ದಾರೆ. ಇದೆಲ್ಲದರ ನಡುವೆ ಪ್ರತಿ ಜಿಲ್ಲೆಯಿಂದ ಮೂರು ಹೆಸರುಗಳನ್ನು ಹೈಕಮಾಂಡ್ ಗೆ ಕಳಿಸಿಕೊಡಲಾಗಿದ್ದು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ಆಂತರಿಕ ಹಾಗೂ ಬಹಿರಂಗ ಕಚ್ಚಾಟ ಮಾತ್ರ ನಿಲ್ಲುತ್ತಿಲ್ಲ.