ಪ್ರಜಾಸ್ತ್ರ ಸುದ್ದಿ
ಮೂಡಿಗೆರೆ(Mudigere): ಮೃತಪಟ್ಟ ಪತಿಯ ಶವದೊಂದಿಗೆ ಪತ್ನಿ 10 ದಿನ ಕಳೆದ ವಿಚಾರ ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ನಲ್ಲಿ ಈ ಒಂದು ಘಟನೆ ನಡೆದಿದೆ. 77 ವರ್ಷದ ಸಿರಿಲ್ ಮೋನಿಸ್ ಮೃತ ವ್ಯಕ್ತಿಯಾಗಿದ್ದಾರೆ. ಇವರ ಪತ್ನಿ ಸಿಸಿಲ್ ಮೋನಿಸ್ ಗೆ ಪತಿ ಮೃತಪಟ್ಟಿರುವ ವಿಚಾರವೆ ಗಮನಕ್ಕೆ ಬಂದಿಲ್ಲವಂತೆ. ಇವರು ಮಾನಸಿಕವಾಗಿ ಆರೋಗ್ಯದಿಂದ ಇರಲಿಲ್ಲವೆಂದು ಹೇಳಲಾಗುತ್ತಿದೆ.
ಇವರ ಮಗ ಮೆಲ್ವಿನ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಮಗಳು ದುಬೈನಲ್ಲಿ ಶಿಕ್ಷಕಿಯಾಗಿದ್ದಾರೆ. ಸಿರಿಲ್ ಮೋನಿಸ್ ಹಾಗೂ ಸಿಸಿಲ್ ಬಣಕಲ್ ಗ್ರಾಮದಲ್ಲಿ ವಾಸವಾಗಿದ್ದರು. ಎರಡು ವಾರಗಳ ಹಿಂದೆ ತಂದೆಗೆ ಚಿಕಿತ್ಸೆ ಕೊಡಿಸಿ ಮಗ ಬೆಂಗಳೂರಿಗೆ ಹೋಗಿದ್ದನಂತೆ. ತಾಯಿಗೆ ಫೋನ್ ಮಾಡಿ ಕೇಳಿದಾಗ ಆರೋಗ್ಯವಾಗಿದ್ದಾರೆ ಎಂದಿದ್ದರಂತೆ.
ಮೃತದೇಹ ಕೊಳೆತ ವಾಸನೆ ಬರುತ್ತಿದ್ದಾಗ ನೆರೆಹೊರೆಯವರಿಗೆ ಅನುಮಾನ ಬಂದಿದೆ. ಇವರ ಮಗ ಮೆಲ್ವಿನ್ ಗೆ ಫೋನ್ ಮಾಡಿ ಹೇಳಿದ್ದಾರೆ. ಆಗ ಸ್ನೇಹಿತರಿಗೆ ಫೋನ್ ಮಾಡಿ ಹೇಳಿದ್ದಾರೆ. ಆಗ ಸ್ನೇಹಿತರು ಪೊಲೀಸರೊಂದಿಗೆ ಮನೆಗೆ ಬಂದಾಗ, ಸಿಸಿಲ್ ಮನವೊಲಿಸಿ ಬಾಗಿಲು ತೆಗೆಯಲು ಪರದಾಡಬೇಕಾಯಿತಂತೆ. ಕೊನೆಗೂ ಮನವೊಲಿಸಿ ಬಾಗಿಲು ತೆಗೆದು ನೋಡಿದಾಗ ಸಿರಿಲ್ ಮೋನಿಸ್ ಮೃತಪಟ್ಟಿರುವುದು ತಿಳಿದಿದೆ. ಮಗ ಬಂದ ಬಳಿಕ ಅಂತ್ಯಕ್ರಿಯೆ ನಡೆಸಲಾಗಿದೆ.




