ಪ್ರಜಾಸ್ತ್ರ ಸುದ್ದಿ
ರಾಮನಗರ(Ramanagara): ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಮಹಿಳೆಯರನ್ನು ಅಕ್ರಮ ಬಂಧನಲ್ಲಿದ್ದು ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಎಂ.ನಾಗವೇಣಿ ಹಾಗೂ ರಕ್ಷಿತಾ ಸಿಂಗ್ ಎಂಬುವರು ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಈ ದೂರಿನ ಹಿನ್ನಲೆಯಲ್ಲಿ ರಾಜ್ಯ ಮಹಿಳಾ ಆಯೋಗದ(Karnataka State Commission for Women) ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ, ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದು, ಸೂಕ್ತ ಕ್ರಮ ತೆಗೆದುಕೊಂಡು ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಹೇಳಿದ್ದಾರೆ.
ಸ್ವರ್ಗ ಹಾಗೂ ನರಕ ಎನ್ನುವ ಕಾನ್ಸೆಪ್ಟ್ ನಲ್ಲಿ ನರಕದಲ್ಲಿರುವವರಿಗೆ ಮೂಲಭೂತ ವ್ಯವಸ್ಥೆ ಸಹ ಮಾಡಿಲ್ಲ. ಪ್ರತ್ಯೇಕ ಶೌಚಾಲಯವಿಲ್ಲ. ಶೌಚಾಲಯಕ್ಕೆ ಹೋಗಬೇಕು ಅಂದರೆ ಸ್ವರ್ಗದಲ್ಲಿರುವವರ ಒಪ್ಪಿಗೆ ಪಡೆಯಬೇಕು. ಊಟಕ್ಕೆ ಗಂಜಿ ಮಾತ್ರ ನೀಡಲಾಗುತ್ತಿದೆ. ಸ್ಪರ್ಧಿಗಳು ಒಪ್ಪಂದದ ಮೇರೆಗೆ ಇದರಲ್ಲಿ ಭಾಗವಹಿಸಿದ್ದರೂ ಕೂಡಾ ಸಂವಿಧಾನದ ಅಡಿಯಲ್ಲಿ ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈಗ ಇದು ಪೊಲೀಸ್ ಅಂಗಳಕ್ಕೆ ಹೋಗಿದೆ. ಪೊಲೀಸರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ಅಲ್ಲಿನ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವುದರ ಜೊತೆಗೆ ಚಾನಲ್, ಅದರ ಮುಖ್ಯಸ್ಥರು ಹಾಗೂ ನಿರೂಪಕ ಸುದೀಪ್(Kichcha Sudeepa) ವಿರುದ್ಧ ಏನಾದರೂ ಕ್ರಮಗಳನ್ನು ತೆಗೆದುಕೊಳ್ಳುತ್ತಾರ ಕಾದು ನೋಡಬೇಕು.