ಪ್ರಜಾಸ್ತ್ರ ಸುದ್ದಿ
ನವಿ ಮುಂಬೈ(Navi Mumbai): ಇಲ್ಲಿ ಭಾನುವಾರ ನಡೆದ ಹೊನಲು ಬೆಳಕಿನ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಚೊಚ್ಚಲ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಕೋಟ್ಯಾಂತರ ಕ್ರಿಕೆಟ್ ಪ್ರೇಮಿಗಳಲ್ಲಿ ಸಂತಸ ಮೂಡಿದೆ. ಹುಡುಗರ ತಂಡದ ಬಳಿಕ ಈಗ ಮಹಿಳಾ ತಂಡವು ವಿಶ್ವ ಚಾಂಪಿಯನ್ಸ್ ಆಗಿದ್ದಾರೆ.
ಟಾಸ್ ಗೆದ್ದ ಸೌಥ್ ಆಫ್ರಿಕಾ ನಾಯಕಿ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಭಾರತ ಮೊದಲು ಬ್ಯಾಟ್ ಮಾಡಿತು. ಶಫಾಲಿ ವರ್ಮಾ 87, ದೀಪ್ತಿ ಶರ್ಮಾ 58, ಸ್ಮೃತಿ ಮಂದಾನಾ 45, ರಿಚಾ ಘೋಷ್ 34 ರನ್ ಗಳಿಂದಾಗಿ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 298 ರನ್ ಗಳನ್ನು ಗಳಿಸಿತು. ಇದರೊಂದಿಗೆ ಫೈನಲ್ ಪಂದ್ಯ ರೋಚಕವಾಗಿರುತ್ತೆ ಅನ್ನೋದು ಮತ್ತಷ್ಟು ಪಕ್ಕಾ ಆಯ್ತು. ಆಫ್ರಿಕಾ ಪರ ಕಾಕಾ 3 ವಿಕೆಟ್ ಪಡೆದು ಸಂಭ್ರಮಿಸಿದರು. ಮಲ್ಬಾ, ಕ್ಲರ್ಕ್, ಟ್ರಯಾನ್ ತಲಾ 1 ವಿಕೆಟ್ ಪಡೆದರು.
ಸವಾಲಿನ ಗುರಿ ಬೆನ್ನು ಹತ್ತಿದ ಸೌಥ್ ಆಫ್ರಿಕಾ ಕೊನೆಯ ತನಕ ಹೋರಾಟ ನಡೆಸಿತು. ನಾಯಕಿ ಲೌರಾ ಭರ್ಜರಿ 101 ರನ್ ಗಳಿಸಿ ತಂಡವನ್ನು ಗೆಲುವಿನತ್ತ ತೆಗೆದುಕೊಂಡು ಹೋಗುವ ಎಲ್ಲ ಪ್ರಯತ್ನ ಮಾಡಿದರು. ಹೀಗಾಗಿ ಶತಕ ಸಿಡಿಸಿದಾಗಲೂ ಸಂಭ್ರಮಿಸಿರಲಿಲ್ಲ. ಆದರೆ, ಭಾರತೀಯ ಬೌಲರ್ ಗಳ ಎದುರು ಆಫ್ರಿಕಾ ಟೀಂ ಶರಣಾಯಿತು. ಬ್ರಿಟ್ಸ್ 23, ಲುಸ್ 25, ಡಾರ್ಕ್ ಸೆನ್ 35 ಬಿಟ್ಟರೆ ಉಳಿದವರು ಹೆಚ್ಚು ಹೊತ್ತು ನಿಲ್ಲದಂತೆ ಮಾಡಲಾಯಿತು. ಬ್ಯಾಟಿಂಗ್ ನಲ್ಲಿ ಅಬ್ಬರಿಸಿದ್ದ ದೀಪ್ತಿ ಶರ್ಮಾ ಬೌಲಿಂಗ್ ನಲ್ಲೂ ಕಮಾಲ್ ಮಾಡಿ 5 ವಿಕೆಟ್ ಪಡೆದು ಭಾರತಕ್ಕೆ ಗೆಲುವು ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅಂತಿಮವಾಗಿ 45.3 ಓವರ್ ಗಳಲ್ಲಿ 246 ರನ್ ಗಳಿಗೆ ಸೌಥ್ ಆಫ್ರಿಕಾ ಆಲೌಟ್ ಆಯ್ತು. ಹೀಗಾಗಿ 52 ರನ್ ಗಳಿಂದ ಗೆಲುವು ಸಾಧಿಸುವ ಮೂಲಕ ನಾಯಕಿ ಹರ್ಮನ್ ಪ್ರಿತ್ ಕೌರ್ ಟೀಂ ಐತಿಹಾಸಿಕ ಸಾಧನೆ ಮಾಡಿತು. ಶಫಾಲಿ ವರ್ಮಾ 2, ಚರಣಿ 1 ವಿಕೆಟ್ ಪಡೆದರು. ದೀಪ್ತಿ ಶರ್ಮಾ ಪ್ಲೇಯರ್ ಆಫ್ ದಿ ಟೂರ್ನಿ ಆದರು. ಶಫಾಲಿ ವರ್ಮಾ ಪ್ಲೇಯರ್ ಆಫ್ ದಿ ಮ್ಯಾಚ್ ಆದರು. ಫೈನಲ್ ಪಂದ್ಯ ನೋಡಲು ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ ಪತ್ನಿಯೊಂದಿಗೆ ಬಂದಿದ್ದರು. ಮಹಿಳಾ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್, ಮಾಜಿ ಬೌಲರ್ ಜ್ವಾಲನ್ ಗೋಸ್ವಾಮಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.




