ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಇದೀಗ ಮತ್ತೊಂದು ಘಟನೆ ಸಾಕ್ಷಿಯಾಗಿದೆ. ಬಿಜೆಪಿ(BJP) ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಸೇರಿ ಬಿಜೆಪಿ ನಾಯಕರು ಮುಡಾ(MUDA), ವಾಲ್ಮೀಕಿ(Valmiki) ನಿಗಮದ ಹಗರಣದ ವಿರುದ್ಧ ಮೈಸೂರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಇದರ ವಿರುದ್ಧ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಟೀಂ ಬಳ್ಳಾರಿ ಚಲೋ ಎಂದು ಹೇಳುವ ಮೂಲಕ ಎರಡು ಬಣಗಳ ನಡುವೆ ಬಹಿರಂಗ ಕದನ ನಡೆದಿದೆ.
ಮುಡಾಕ್ಕಿಂತ ವಾಲ್ಮೀಕಿ ನಿಗಮದ ಹಗರಣ ದೊಡ್ಡದಿದೆ. ನಾವು ಕೂಡಲಸಂಗಮದಿಂದ ಬಳ್ಳಾರಿಯವರೆಗೂ ಪಾದಯಾತ್ರೆ ಮಾಡುತ್ತೇವೆ ಅನ್ನೋದು ರಮೇಶ ಜಾರಕಿಹೊಳಿ(Ramesh Jarakiholi) ಮಾತು. ನಾನು ಹೈಕಮಾಂಡ್ ಅನುಮತಿ ಕೇಳ್ತೀನಿ. ನಮ್ಮ ಜನಾಂಗಕ್ಕೆ ಅನ್ಯಾಯವಾಗಿದೆ. ನಾನು, ಯತ್ನಾಳ ಸೇರಿ ಹಲವು ಶಾಸಕರು ಬಳ್ಳಾರಿ ಪಾದಯಾತ್ರೆ ಮಾಡುತ್ತೇವೆ. ಎಲ್ಲರೂ ಸೇರಿ ಮಾಡಬೇಕು ಎಂದುಕೊಂಡಿದ್ದೇವೆ. ಹೈಕಮಾಂಡ್ ಸ್ವಲ್ಪ ತಡೆಯಿರಿ ಎಂದು ದಿನಾಂಕ ನಿಗದಿ ಮಾಡಿಲ್ಲ ಎಂದಿದ್ದಾರೆ.
ಮೈಸೂರು ಪಾದಯಾತ್ರೆ ಹೊರಟಿದ್ದು ಸಿದ್ದರಾಮಯ್ಯನವರ ವಿರುದ್ಧ ಹೋರಾಟವೋ, ಡಿ.ಕೆ ಶಿವಕುಮಾರರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶವೋ ಕಾದು ನೋಡಬೇಕಿದೆ ಎಂದು ಶಾಸಕ ಯತ್ನಾಳ(Yatnala) ಹೇಳುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ. ನಾವು ಯಾವುದೇ ಒಳ ಒಪ್ಪಂದವಿಲ್ಲದೆ ಹೋರಾಟ ಮಾಡುತ್ತಿದ್ದೇವೆ ಎನ್ನುವ ಮೂಲಕ ಸ್ವಪಕ್ಷೀಯ ನಾಯಕರ ಪಾದಯಾತ್ರೆಯ ಬಗ್ಗೆಯೇ ಆರೋಪ ಮಾಡಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ಎರಡು ತಂಡಗಳಾಗಿ ವಿರುದ್ಧ ದಿಕ್ಕಿನಲ್ಲಿ ಪಾದಯಾತ್ರೆ ಮಾಡುತ್ತಾ? ಬಿಜೆಪಿ ಹೈಕಮಾಂಡ್ ಇದೆಲ್ಲವನ್ನೂ ನೋಡಿಕೊಂಡು ಸುಮ್ಮನೆ ಇರುತ್ತಾ ಅನ್ನೋದು ಶೀಘ್ರದಲ್ಲಿ ತಿಳಿಯಲಿದೆ.