ಪ್ರಜಾಸ್ತ್ರ ಸುದ್ದಿ
ದಾವಣಗೆರೆ(Davanagere): ಸರ್ಕಾರ ಕೆಡವಿ ಮುಖ್ಯಮಂತ್ರಿಯಾಗಲು ಮಹಾನಾಯಕರೊಬ್ಬರು ಸಾವಿರ ಕೋಟಿ ತೆಗೆದಿಟ್ಟಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಸ್ವಪಕ್ಷೀಯದವರ ವಿರುದ್ಧವೇ ಗಂಭೀರ ಆರೋಪ ಮಾಡಿದರು. ಆಪರೇಷನ್ ಬಿಜೆಪಿ, ಶಾಸಕರ ಖರೀದಿಗೆ ಹೈಕಮಾಂಡ್ ಒಪ್ಪುವುದಿಲ್ಲ. ಸರ್ಕಾರ ತಾನಾಗಿಯೇ ಬೀಳುವ ಕಾಲ ಸಮೀಪಿಸಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಉರುಳಿಸುವುದಕ್ಕೆ ಬಿಜೆಪಿ ಪ್ರಯತ್ನ ಮಾಡಲ್ಲ ಎಂದರು.
ಹಣ ಮೀಸಲು ಇಟ್ಟುಕೊಂಡವರು ಯಾರೆಂದು ನೀವೇ ಅಂದಾಜು ಮಾಡಬೇಕು ಎಂದು ಪತ್ರಕರ್ತರಿಗೆ ಮರು ಪ್ರಶ್ನೆ ಹಾಕಿದರು. ಈ ಹಿಂದೆ ಅವರ ಮನೆಯಲ್ಲಿ ನೋಟು ಎಣಿಕೆ ಯಂತ್ರ ಪತ್ತೆಯಾಗಿತ್ತು. ಸರ್ಕಾರ ಬೀಳಿಸಲು ಕೆಲವರ ಬಳಿ ಹಣವಿದೆ. ಭ್ರಷ್ಟಾಚಾರ ಮಾಡಿದ ಸಂಪತ್ತು ಇದೆ. ಆದರೆ, ರಾಜ್ಯ ಸರ್ಕಾರ ವಿಸರ್ಜನೆಯಾಗುವ ತನಕ ನಾವು ಕಾಯುತ್ತೇವೆ. ಚುನಾವಣೆ ಎದುರಿಸಿ ಬಹುಮತದೊಂದಿಗೆ ಸರ್ಕಾರ ರಚಿಸುತ್ತೇವೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಸಿಡಿದೆದ್ದಿರುವ ಬಣ ಇದೀಗ ದಾವಣಗೆರೆಯಲ್ಲಿ ಗೌಪ್ಯ ಸಭೆ ಮಾಡಿದೆ. ಈ ಹಿಂದೆ ಬೆಳಗಾವಿಯಲ್ಲಿ ಸಭೆ ನಡೆಸಲಾಗಿತ್ತು. ಭಾನುವಾರ ನಡೆಸಿದ ಸಭೆಯಲ್ಲಿ ಜಿ.ಎಂ ಸಿದ್ದೇಶ್ವರ್, ಪ್ರತಾಪ್ ಸಿಂಹ, ಶಾಸಕ ಬಿ.ಪಿ ಹರೀಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಆದರೆ, ರಮೇಶ ಜಾರಕಿಹೊಳಿ ಭಾಗವಹಿಸಿರಲಿಲ್ಲ. ವಿಜಯೇಂದ್ರ ಬಗ್ಗೆ ಬಹಿರಂಗವಾಗಿ ಏನು ಮಾತನಾಡದಂತೆ ಪಕ್ಷ ಸೂಚನೆ ನೀಡಿದೆ. ಹೀಗಾಗಿ ಏನೂ ಮಾತನಾಡುವುದಿಲ್ಲವೆಂದು ಯತ್ನಾಳ್ ಹೇಳಿದರು.