ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಬದಲಾವಣೆ ಸಂಬಂಧ ಬಂಡಾಯ ಎದ್ದಿರುವ ಯತ್ನಾಳ್, ರಮೇಶ್ ಜಾರಕಿಹೊಳಿ, ಪ್ರತಾಪ್ ಸಿಂಹ ಸೇರಿದಂತೆ ಹಲವು ನಾಯಕರ ಟೀಂ ಪದೆಪದೆ ಸಭೆ ನಡೆಸುತ್ತಿದೆ. ಅವರೇ ಪ್ರತ್ಯೇಕವಾಗಿ ಹೋರಾಟಗಳನ್ನು ಮಾಡುವುದು, ಸ್ವಪಕ್ಷೀಯ ನಾಯಕರ ವಿರುದ್ಧವೇ ಆರೋಪಗಳನ್ನು ಮಾಡುವುದು ಮಾಡುತ್ತಿದ್ದಾರೆ. ಹೀಗಾಗಿ ಕೇಂದ್ರ ಶಿಸ್ತು ಸಮಿತಿ ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ಶೋಕಾಸ್ ನೀಡಿತು. ದೆಹಲಿಗೆ ಹೋಗಿ ಸಮಿತಿ ಭೇಟಿ ಮಾಡಿದ ಬಳಿಕವೂ ಬಂಡಾಯ ನಾಯಕರ ಸಭೆ ನಡೆದಿದೆ.
ಬುಧವಾರ ದೆಹಲಿಯಲ್ಲಿ ಹೈಕಮಾಂಡ್ ನಾಯಕರು ಒಂದಿಷ್ಟು ಮಾತುಗಳನ್ನು ಹೇಳಿದ್ದಾರೆ. ಎಚ್ಚರಿಕೆ ನೀಡಿದ್ದಾರೆ. ಹೀಗಿದ್ದರೂ ಅಲ್ಲಿಯೇ ಯತ್ನಾಳ್ ಬಣದ ಸಭೆ ನಡೆದಿದೆ. ಈ ಬಗ್ಗೆ ಕೇಳಿದರೆ ವಕ್ಫ್ ವಿಚಾರದ ಚರ್ಚೆಗಾಗಿ ಸಭೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಇದರ ನಡುವೆ ರಮೇಶ್ ಜಾರಕಿಹೊಳಿ ಮಾತನಾಡಿ, ವಿಜಯೇಂದ್ರ ಸಣ್ಣ ಹುಡುಗನಿದ್ದಾನೆ. ಹುಡುಗ ಬುದ್ದಿಯಿದೆ. ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಹೇಳಿದ್ದೇವೆ. ಅನುಭವ ಆದ ಮೇಲೆ ಅಧ್ಯಕ್ಷರಾದರೆ ಸೂಕ್ತ ಎನ್ನುವ ಮೂಲಕ ತಮ್ಮ ಬೇಡಿಕೆ ಏನು ಅನ್ನೋದು ಮತ್ತೆ ಹೇಳಿದ್ದಾರೆ.
ಬಿಜೆಪಿಯೊಳಗಿನ ಬಣ ರಾಜಕೀಯ ಸಧ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಯತ್ನಾಳ್ ಕಠೋರ ಮಾತುಗಳು ಪಕ್ಷದ ನಾಯಕರಿಗೆ, ಹೈಕಮಾಂಡ್ ಗೆ ತಲೆ ನೋವು ತಂದಿರುವುದು ಸತ್ಯ. ಇವರು ಇಟ್ಟಿರುವ ಬೇಡಿಕೆಗೆ ಸ್ಪಂದಿಸಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರರನ್ನು ಕೆಳಗೆ ಇಳಿಸಲಾಗುತ್ತಾ ಗೊತ್ತಿಲ್ಲ. ಒಂದು ವೇಳೆ ಹೀಗೆ ಮಾಡಿದರೆ ಉಳಿದ ರಾಜ್ಯಗಳಲ್ಲಿ ಬಿಜೆಪಿಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಎನ್ನುವುದು ಮುಖ್ಯವಾಗುತ್ತೆ. ಯತ್ನಳ್-ರಮೇಶ್ ಜಾರಕಿಹೊಳಿ ಬಣಕ್ಕೆ ಹಿನ್ನಡೆಯಾದರೆ ಅವರ ಮುಂದಿನ ನಡೆ ಏನಾಗಿರುತ್ತೆ ಎನ್ನುವ ಕುತೂಹಲ ಸಹ ಇದ್ದೇ ಇದೆ.