ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸ್ವಪಕ್ಷದ ವಿರುದ್ಧವೇ ಗಂಭೀರವಾದ ಆರೋಪಗಳನ್ನು ಮೇಲಿಂದ ಮೇಲೆ ಮಾಡುತ್ತಿದ್ದು, ವರಿಷ್ಠರಿಗೆ ಸಿಟ್ಟು ತರಿಸಿದೆ. ಅದು ಅಲ್ಲದೆ ರಾಜ್ಯ ಕಾಂಗ್ರೆಸ್ ಸರ್ಕಾರ ಕೆಡವಲು ಕೆಲವರು ಒಂದು ಸಾವಿರ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿಟ್ಟಿದ್ದಾರೆ ಎನ್ನುವ ಹೇಳಿಕೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದೆ. ಇದೆಲ್ಲವನ್ನು ಗಮನಿಸಿರುವ ಬಿಜೆಪಿ(BJP) ಹೈಕಮಾಂಡ್ ಹರಿಯಾಣ ಚುನಾವಣೆ ಬಳಿಕ ಯತ್ನಾಳ್ ವಿರುದ್ಧ ಕ್ರಮ ತೆಗೆದುಕೊಳ್ಳು ಮುಂದಾಗಿದೆ.
ಯಡಿಯೂರಪ್ಪ(BSY) ಹಾಗೂ ಅವರ ಪುತ್ರರ ಮೇಲಿನ ಅಸಮಾಧಾನ ಪಕ್ಷದ ಮೇಲೂ ಪರಿಣಾಮ ಬೀರುತ್ತಿದೆ. ಯಾಕಂದರೆ, ಪಕ್ಷದ ವಿರುದ್ಧವೇ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಪಕ್ಷಕ್ಕೆ ಸಾಕಷ್ಟು ಮುಜುಗರ ಉಂಟು ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ(J.P Nadda) ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್(Amit Sha) ಶಾ ಗರಂ ಆಗಿದ್ದಾರಂತೆ. ಮುಡಾ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ವಿರುದ್ಧ ಒತ್ತಡ ಹೇರುವ ಬದಲು ಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೆ. ಹೀಗಾಗಿ ಹೈಕಮಾಂಡ್ ಯತ್ನಾಳ್ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಿದೆಯಂತೆ. ಇದೇ ಕಾರಣಕ್ಕೆ ಯತ್ನಾಳ ಟೀಂ ಹುಬ್ಬಳ್ಳಿಯಲ್ಲಿ ಸೇರಿಬೇಕಿದ್ದ ಸಭೆಯನ್ನು ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ.