ಪ್ರಜಾಸ್ತ್ರ ಸುದ್ದಿ
ರಾಮನಗರ(Ramanagara): ಶುಕ್ರವಾರ ನಡೆದ ಕಾಂಗ್ರೆಸ್ ಜನಾಂದೋಲನ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ(HDK) ವಿರುದ್ಧ ಡಿಸಿಎಂ ಡಿ.ಕೆ ಶಿವಕುಮಾರ್(DK Shivakumara) ವಾಗ್ದಾಳಿ ನಡೆಸಿದ್ದರು. ದೇವೇಗೌಡ ಕುಟುಂಬ ಎಲ್ಲೆಲ್ಲಿ ಎಷ್ಟೆಷ್ಟು ಆಸ್ತಿ ಮಾಡಿದೆ, ಅದನ್ನು ಮಾಡಿದ್ದು ಹೇಗೆ ಎನ್ನುವ ಕುರಿತು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದರು. ಈ ಮೂಲಕ ಹೆಚ್ಡಿಕೆ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು. ಅದಕ್ಕೆ ಇಂದು ಹೆಚ್ಡಿಕೆ ಬಿಡದಿಯಲ್ಲಿ ನಡೆದ ಬಿಜೆಪಿ-ಜೆಡಿಎಸ್ ಪಾದಯಾತ್ರೆ 2ನೇ ದಿನದಲ್ಲಿ ಡಿಕೆಶಿ ವಿರುದ್ಧ ಕಿಡಿ ಕಾರಿದ್ದಾರೆ.
ಸದಾಶಿವನಗರದಲ್ಲಿ ಮೂವರು ವಿಧವರೆಯನ್ನು ಬೆದರಿಸಿ ನಿಮ್ಮ ಮಗಳಿಗೆ ಆಸ್ತಿ ಬರೆಸಿಕೊಂಡಿದ್ದೀರಿ. ಬಿಡದಿಯಲ್ಲಿ ಐಕಾನ್ ನರ್ಸಿಂಗ್ ಸ್ಕೂಲ್ ಭೂಮಿಯನ್ನು ಸಾಲ ಪಡೆದವರಿಂದ ಬೆದರಿಸಿ ಬರೆಸಿಕೊಂಡಿದ್ದೀರಿ. ಕನಕಪುರದಲ್ಲಿ(Kanakapura) ಎಷ್ಟು ಕುಟುಂಬಗಳನ್ನು ಹಾಳು ಮಾಡಿದ್ದೀರಿ. ಡಿ.ಕೆ ಶಿವಕುಮಾರಗೆ ಅಜ್ಜಯ್ಯನ ಶಾಪ ತಟ್ಟಲಿದೆ ಎಂದು ವಾಗ್ದಾಳಿ ನಡೆಸಿದರು. ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಶಾಂತಿನಗರ ಹೌಸಿಂಗ್ ಸೊಸೈಟಿಗೆ ದಲಿತರಿಗೆ ಕೊಟ್ಟ ಭೂಮಿಯನ್ನು ಡಿಕೆಶಿ ಹೆಂಗ ಲಪಟಾಯಿಸಿದ್ದಾರೆ ಅನ್ನೋದು ಸಿದ್ಧರಾಮಯ್ಯನವರಿಗೆ ಗೊತ್ತಿಲ್ಲವೇ? ನಾನು ಅಧಿಕಾರ ದುರ್ಬಳಕೆ ಮಾಡಿಕೊಂಡು, ದಬ್ಬಾಳಿಕೆ ಮಾಡಿ ಜಮೀನು ಖರೀದಿ ಮಾಡಿದ್ದು ಯಾರಾದರೂ ಹೇಳಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದರು.
ಮುಖ್ಯಮಂತ್ರಿಗಳ(CM) ಕುಟುಂಬ 15 ಸೈಟ್ ಪಡೆದಿದ್ದಕ್ಕೆ ನಮ್ಮ ವಿರೋಧವಿಲ್ಲ. ಕಾನೂನುಬಾಹಿರವಾಗಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಸರ್ಕಾರದ ಭೂಮಿಯನ್ನು ಸುಳ್ಳು ದಾಖಲೆ ನೀಡಿ ಸೈಟ್ ಪಡೆದಿದ್ದೀರಿ ಅಂತಾ ಕಿಡಿ ಕಾರಿದರು. ಈ ಮೂಲಕ ಪಾದಯಾತ್ರೆ ಡಿ.ಕೆ ಶಿವಕುಮಾರ್ ವರ್ಸಸ್ ಹೆಚ್.ಡಿ ಕುಮಾರಸ್ವಾಮಿ ಎನ್ನುವಂತಾಗಿದೆ. ಮೈಸೂರು ತಲುಪವವರೆಗೆ ಏನೆಲ್ಲ ಬೆಳವಣಿಗೆ ಆಗುತ್ತಿದೆ ಕಾದು ನೋಡಬೇಕು.