ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಭೂಸ್ವಾಧೀನ ಪಡಿಸಿಕೊಂಡಿದ್ದರೂ ಪರಿಹಾರ ನೀಡದೆ ಇರುವುದರಿಂದ ಪೆಟ್ರೋಲ್ ಸುರಿದುಕೊಂಡು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯದಲ್ಲಿ ನಡೆದಿದೆ. ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಮೃತ ರೈತನ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಸಿಎಂ ಜೊತೆಗೆ ಮಾತನಾಡಿ ಇನ್ನು ಹೆಚ್ಚಿನ ಪರಿಹಾರ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.
ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲೂಕಿನ ಮೂಡನಹಳ್ಳಿ ಗ್ರಾಮದ ರೈತ ಮಂಜೇಗೌಡ ಎಂ.ಡಿ(55) ಭಾನುವಾರ ಜಿಲ್ಲಾಧಿಕಾರಿ ಕಚೇರಿ ಮುಂದಿನ ಉದ್ಯಾನದಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸಾರ್ವಜನಿಕರು ಬೆಂಕಿ ನಂದಿಸಿ ನಗರದ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಬುಧವಾರ ಮುಂಜಾನೆ ರೈತ ಮೃತಪಟ್ಟಿದ್ದಾನೆ. ಸಚಿವ ಚೆಲುವರಾಯಸ್ವಾಮಿ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ರೈತನ ಜಮೀನಿನ ಜಂಟಿ ಸರ್ವೇ ನಡೆಸಿ ಅರಣ್ಯ ಇಲಾಖೆಗೆ ಸೇರದೆ ಇದ್ದರೆ ಕುಟುಂಬಸ್ಥರಿಗೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.




