ಬಾಲ್ಯ ವಿವಾಹ ತಡೆಗೆ ಸಂಪರ್ಕವಾಗಿ ಕಾರ್ಯನಿರ್ವಹಿಸಿ: ಜಿಲ್ಲಾಧಿಕಾರಿ ಭೂಬಾಲನ್

95

ಪ್ರಜಾಸ್ತ್ರ ಸುದ್ದಿ

ವಿಜಯಪರು: ಬಾಲ್ಯ ವಿವಾಹ ತಡೆಗಟ್ಟಲು ಶಿಕ್ಷಣ ಇಲಾಖೆಯ ಪಾತ್ರ ಬಹುಮುಖ್ಯವಾಗಿದ್ದು, ಶಾಲೆ ಬಿಟ್ಟ ಮಕ್ಕಳ ಬಗ್ಗೆ ನಿರಂತರ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಬೇಕು. ಬಾಲ್ಯವಿವಾಹದ ಕುರಿತಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಮೂಲಕ ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ತಡೆಗಟ್ಟಲು ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನಾ ಕಾರ್ಯಕ್ರಮಗಳ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಹಾಗೂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪೋಕ್ಸೋ, ಬಾಲ್ಯವಿವಾಹ, ಲೈಂಗಿಕ ಹಲ್ಲೆ, ಅಪಹರಣಗಳಂತ ಘಟನೆಗಳು ನಡೆಯದಂತೆ  ನೋಡಿಕೊಳ್ಳಬೇಕು. ಬಾಲ್ಯ ವಿವಾಹ ತಡೆ ಹಾಗೂ ಪೋಕ್ಸೋ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಸೂಕ್ತ ರೀತಿಯಲ್ಲಿ ಕೌನ್ಸಿಲಿಂಗ್ ಹಾಗೂ ವೈದ್ಯಕೀಯ ಚಿಕಿತ್ಸೆ ನೀಡಬೇಕು. 

ಜಿಲ್ಲೆಯಲ್ಲಿ ಪ್ರಸವ ಪೂರ್ವ ಲಿಂಗ ಪತ್ತೆ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿ. ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಗಳನ್ನು ಅಚ್ಚುಕಟ್ಟಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮಹಿಳೆಯರ ಸಂರಕ್ಷಣಾ ಕಾಯ್ದೆ 2005ರನ್ವಯ ಮುಂಜಾಗೃತಾ ಕ್ರಮಕೈಗೊಂಡು ಮಹಿಳೆಯರ ಸಂರಕ್ಷಣೆಗೆ ಆದ್ಯತೆ ನೀಡಬೇಕು.  2024-25ನೇ ಸಾಲಿನಲ್ಲಿ ದಾಖಲಾದ ಪ್ರಕರಣಗಳನ್ನು ಕಾನೂನು ಸೇವಾ ಪ್ರಾಧಿಕಾರದ ಮೂಲಕ ಸೂಕ್ತ ರೀತಿಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು ಎಂದು ಸೂಚನೆ ನೀಡಿದರು.

ವಿಜಯಪುರ ಎರಡು, ಸಿಂದಗಿಯಲ್ಲಿರುವ ಬಾಲಕಿಯರ ವಸತಿ ನಿಲಯಗಳಲ್ಲಿ ಕಲ್ಪಿಸಿರುವ ಮೂಲಭೂತ ಸೌಕರ್ಯಗಳನ್ನು ಪರಿಶೀಲನೆ ನಡೆಸಬೇಕು. ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಅಲ್ಲಿ ಒದಗಿಸಿರುವ ಸೌಲಭ್ಯಗಳ ಬಗ್ಗೆ ಚಾಯಾಚಿತ್ರ ಸಹಿತ ಸಮಗ್ರ ವರದಿ ನಿಡಬೇಕು. ಅಲ್ಲಿನ ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆ ನೀಡಬೇಕು. ಜಿಲ್ಲೆಯ ಬಾಲಮಂದಿರ ಮಕ್ಕಳ ಆರೋಗ್ಯದ ಬಗ್ಗೆ ನಿರಂತರವಾಗಿ ವೈದ್ಯಕೀಯ ತಪಾಸಣೆ ಮಾಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ರಿಷಿ ಆನಂದ ಮಾತನಾಡಿ, ಜಿಲ್ಲೆಯಲ್ಲಿ ರಾಷ್ಟ್ರೀಯ ಪೋಷಣ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಮಾತೃವಂದನಾ ಯೋಜನೆಯೆ ನಿರಂತರಾವಗಿ ಪ್ರಗತಿ ಸಾಧಿಸಿ ಗುರಿ ಸಾಧಿಸಬೇಕು. ಗರ್ಭಿಣಿ ಮಹಿಳೆಯರಿಗೆ ಸಮರ್ಪಕವಾಗಿ ಪೌಷ್ಠಿಕ ಆಹಾರ ಒದಗಿಸಬೇಕು. ಅಂಗನಾವಾಡಿ, ಆಶಾ ಕಾರ್ಯಕರ್ತರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಅವರಿಗೆ ಕಾರ್ಯಗಾರ ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.




error: Content is protected !!