ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕಳೆದ 40, 50 ವರ್ಷಗಳ ಹಿಂದಿನ ರಾಜಕಾರಣ(Politics) ಎಷ್ಟೊಂದು ಪ್ರಾಮಾಣಿಕವಾಗಿತ್ತು. ವಾಸ್ತವಕ್ಕೆ ಹತ್ತಿರವಾಗಿತ್ತು. ಸಮಾಜಮುಖಿಯಾಗಿತ್ತುಅನ್ನೋದು ಇತಿಹಾಸ ಹೇಳುತ್ತೆ. ಆದರೆ, ಇತ್ತೀಚಿನ ರಾಜಕಾರಣ ಎಷ್ಟೊಂದು ಅರಾಜಕತೆಯಿಂದ ಕೂಡಿದೆ ಅನ್ನೋದಕ್ಕೆ ಯಾವ ಸಾಕ್ಷಿ ಪುರಾವೆಗಳು ಬೇಕಿಲ್ಲ. ಯಾಕಂದರೆ, ಈಗಿನ ಜನನಾಯಕರು ಹೇಳುವಂತೆ ಅವರ ರಾಜಕೀಯ ತೆರೆದ ಪುಸ್ತಕ. ಅಲ್ಲಿ ಎಷ್ಟೊಂದು ಹುಳುಕುಗಳಿವೆ, ಹಗರಣಗಳಿವೆ, ಅನ್ಯಾಯಗಳಿವೆ ಎಂದು ಜನರಿಗೆ ತಿಳಿದಿದೆ. ಇದೆಲ್ಲದಕ್ಕೂ ಪ್ರಸ್ತುತ ಸಾಕ್ಷಿಯಂದರೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್(Congress BJP JDS) ನಾಯಕರ ಬೃಹತ್ ಭ್ರಷ್ಟಾಚಾರದ ಗಂಭೀರ ಆರೋಪಗಳು. ಎಲ್ಲರೂ ನಾವು ಕ್ಲೀನ್. ಕಾನೂನು ಅಡಿಯಲ್ಲಿಯೇ ಇದ್ದೇವೆ. ಸತ್ಯಹರಿಶ್ಚಂದ್ರನ ಮತ್ತೊಂದು ಅವತಾರವೇ ನಾವು ಎನ್ನುತ್ತಿದ್ದಾರೆ.
ಮುಡಾ, ವಾಲ್ಮೀಕಿ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ(Siddramaiah) ವಿರುದ್ಧ, ದಬ್ಬಾಳಿಕೆ, ಹೆದರಿಸಿ, ಜೀವ ಬೆದರಿಕೆ ಹಾಕಿ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್(DK Shivakumar) ವಿರುದ್ಧ ಬಿಜೆಪಿ, ಜೆಡಿಎಸ್ ನಾಯಕರು ದಾಖಲೆಗಳಿವೆ ಎಂದು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಹೆಚ್.ಡಿ ಕುಮಾರಸ್ವಾಮಿ(HDK) ಗಣಿ ಹಗರಣ, ಯಡಿಯೂರಪ್ಪ(BSY) ಡಿನೋಟಿಫಿಕೇಷನ್ ಪ್ರಕರಣ ಸೇರಿ ಹತ್ತು ಹಲವು ಭ್ರಷ್ಟಾಚಾರದ ದಾಖಲೆಗಳು ನಮ್ಮ ಬಳಿ ಇವೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಹೀಗಿದ್ದರೂ ಯಾರೊಬ್ಬರ ಮೇಲೂ ಕಾನೂನು ಅಸ್ತ್ರ ಪ್ರಯೋಗವಾಗುತ್ತಿಲ್ಲವಲ್ಲ ಯಾಕೆ ಅನ್ನೋ ಪ್ರಶ್ನೆ ಜನರಲ್ಲಿ ಮೂಡಿದೆ. ಬಹಿರಂಗವಾಗಿ ಭ್ರಷ್ಟಾಚಾರದ(Corruption) ಆರೋಪ ಮಾಡುವ ನಾಯಕರುಗಳಿಂದ ಅಧಿಕಾರಿಗಳು ಸ್ವಯಂ ಪ್ರೇರಿತರಾಗಿ ಸ್ಪಷ್ಟೀಕರಣ ಪಡೆದು, ದಾಖಲೆಗಳನ್ನು ವಶಪಡಿಸಿಕೊಂಡು ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಲು ಆಗುತ್ತಿಲ್ಲ. ಕೋರ್ಟ್, ಕಾನೂನು, ಶಿಕ್ಷೆ ಅನ್ನೋದು ಜನಸಾಮಾನ್ಯರಿಗೆ ಮಾತ್ರವೆಂದು ಆಡಿಕೊಳ್ಳುತ್ತಿದ್ದಾರೆ.
ಜನರ ಬೆವರಿನ ಹಣ(Tax) ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಹೋಗತ್ತೆ. ಅದು ಮರಳಿ ಜನರ ಕಲ್ಯಾಣಕ್ಕೆ ಉಪಯೋಗವಾಗುವುದಕ್ಕಿಂತ ಹೆಚ್ಚಾಗಿ ಆಡಳಿತದ ಚುಕ್ಕಾಣಿ ಹಿಡಿದವರು ಹಾಗೂ ಅವರನ್ನು ವಿರೋಧಿಸುವ ವಿಪಕ್ಷಗಳ ನಾಯಕರ ಜೇಬು ಸೇರುತ್ತಿದೆ. ಅವರ ಇಡೀ ಕುಟುಂಬ, ಬಂಧು, ಬಳಗದವರು ಹತ್ತಾರು ತಲೆಮಾರು ಕುಂತು ತಿಂದ್ದರೂ ಕರಗದಷ್ಟು ಆಸ್ತಿ ಮಾಡುತ್ತಿದ್ದಾರೆ. ಸಾವು ಎಲ್ಲರಿಗೂ ಇದೆ ಎನ್ನುವುದು ತಿಳಿದ ಮನುಷ್ಯ ಯಾರಿಗೂ ಅನ್ಯಾಯ ಮಾಡಲ್ಲ ಎನ್ನುವ ಬುದ್ಧನ ಮಾತು ಎಷ್ಟೊಂದು ಸತ್ಯ ಮತ್ತು ಸ್ಪಷ್ಟವಾಗಿದ್ದರೂ ಇಷ್ಟೊಂದು ಅನಾಚಾರ ಮಾಡುತ್ತಲೇ ನಾವು ಪ್ರಮಾಣಿಕರೆಂದು ಅದ್ಯಾವ ಬಾಯಿಯಿಂದ ಹೇಳುತ್ತಾರೋ? ಅನ್ಯಾಯದಿಂದ ಸಂಪಾದನೆ ಮಾಡಿ, ಎಲ್ಲ ಕಾನೂನುಗಳಿಂದಲೂ ತಪ್ಪಿಸಿಕೊಂಡು ಭಂಡ ಬದುಕು ಸಾಗಿಸಬೇಕಿದ್ದರೆ ರಾಜಕೀಯಕ್ಕೆ ಬರಬೇಕು ಎನ್ನುಷ್ಟರ ಮಟ್ಟಿಗೆ ತಂದು ನಿಲ್ಲಿಸಲಾಗಿದೆ. ಎಲ್ಲರ ದುರಾಡಳಿತಕ್ಕೆ ಕಾಲವೇ ಒಂದು ದಿನ ಉತ್ತರಿಸಲಿದೆ.