ಪ್ರಜಾಸ್ತ್ರ ಸುದ್ದಿ
ಜಗತ್ತಿನಲ್ಲಿ ಎಲ್ಲರಿಗೂ ಸಮಾನತೆ ಇರಬೇಕು ಎಂದು ಹೋರಾಟಗಳು ಇಂದಿಗೂ ನಡೆಯುತ್ತಿವೆ. ಅನೇಕ ದೇಶಗಳಲ್ಲಿ ಇದು ಸಾಧ್ಯವಾಗಿದೆ. ಮತ್ತಷ್ಟು ದೇಶಗಳು ಗಂಡು, ಹೆಣ್ಣಿನ ಸಮಾನತೆಗೆ ತೆರೆದುಕೊಳ್ಳುತ್ತಿವೆ. ಆದರೆ, ಕೆಲವು ದೇಶಗಳು ಹೆಣ್ಮಕಳಿಗೆ ಭೂಮಿಯ ಮೇಲೆಯೇ ನರಕ ದರ್ಶನ ಮಾಡಿಸುತ್ತಿವೆ. ಅಫ್ಘಾನಿಸ್ತಾನದಲ್ಲಿ(Afghanistan) ತಾಲಿಬಾನ್ ಆಡಳಿತ ನಡೆಸುತ್ತಿದೆ. ಇದು ದಿನಕ್ಕೊಂದು ಕಾನೂನು ಮಾಡಿ ಅಕ್ಷರಶಃ ಉಸಿರುಕಟ್ಟಿಸುವಂತಹ ವಾತಾವರಣ ನಿರ್ಮಿಸುತ್ತಿದೆ.
ಈಗಾಗ್ಲೇ ಶಾಲೆ, ಕಾಲೇಜು, ಹೋಟೆಲ್, ಪಾರ್ಲರ್, ಪಾರ್ಕ್ ಸೇರಿದಂತೆ ಸಾರ್ವಜನಿಕವಾಗಿ ಎಲ್ಲಿಯೂ ಹೋಗದಂತೆ ಹೆಣ್ಮಕ್ಕಳಿಗೆ ನಿಯಮ(Rules) ಹೇರಿದೆ. ಇದೀಗ ಹೆಣ್ಮಕ್ಕಳು ಇರುವ ಕಟ್ಟಡಗಳಿಗೆ ಕಿಟಕಿಯೂ ಇರಬಾರದು ಎಂದು ಹೇಳಿದೆ. ಹೊಸದಾಗಿ ಮನೆ ಕಟ್ಟುವವರು ಈ ನಿಯಮಗಳನ್ನು ಪಾಲಿಸಬೇಕು. ಈಗಾಗ್ಲೇ ಕಟ್ಟಿರುವವರು ಕಿಟಕಿಗಳನ್ನು ಬಂದ್ ಮಾಡಬೇಕು. ಅಡುಗೆ ಮನೆ, ಅಂಗಳ ಸೇರಿದಂತೆ ಇತರೆ ಕಡೆ ಕಿಟಕಿ ಬಿಡುವಂತಿಲ್ಲ. ಶಿಕ್ಷಣ, ಉದ್ಯೋಗ, ಹಾಡುವುದು, ಸ್ವತಂತ್ರವಾಗಿ ಹೊರಗಡೆ ತಿರುಗಾಡುವುದಕ್ಕೂ ನಿರ್ಬಂಧ ವಿಧಿಸಿ ಈಗಾಗ್ಲೇ ಮನೆಯಲ್ಲಿ ಬಂಧಿಸಿರುವಾಗ ಈಗ ಕಿಟಕಿಯೂ ಇಲ್ಲದಂತೆ ಮಾಡುವ ಮೂಲಕ ಹೆಣ್ಮಕ್ಕಳನ್ನು ಜೀವಂತ ಸಮಾಧಿ ಮಾಡಲಾಗುತ್ತಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.