ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಇಲ್ಲಿನ ವಾಖಂಡೆ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧ 3ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ 25 ರನ್ ಗಳಿಂದ ಸೋಲುವ ಮೂಲಕ ಮಣ್ಣುಮುಕ್ಕಿದೆ. ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಟಾಮ್ ಲಥಮ್ ಬಳಗ ಕ್ಲೀನ್ ಸ್ವಿಪ್ ಸಾಧಿಸಿದೆ. ಗೆಲುವು ಸಾಧಿಸಲು 145 ರನ್ ಬೇಕಿತ್ತು. ಇನ್ನು ಎರಡೂವರೆ ದಿನ ಸಮಯವಿತ್ತು. ಆದರೆ, ಎಜಾಜ್ ಪಟೇಲ್, ಗ್ಲೇನ್ ಫಿಲ್ಪಿಸ್ ಮಾರಕ ಬೌಲಿಂಗ್ ನಿಂದಾಗಿ 121 ರನ್ ಗಳಿಗೆ ಆಲೌಟ್ ಆಯ್ತು.
ರಿಷಬ್ ಪಂತ್ 64 ರನ್ ಗಳು ಬಿಟ್ಟರೆ ಉಳಿದವರು ಬಂದ ಪುಟ್ಟ ಹೋದ ಪುಟ್ಟ ರೀತಿ ಆಡಿದರು. ಹೀಗಾಗಿ ಸರಣಿಯನ್ನು ಹೀನಾಯವಾಗಿ ಸೋಲುವುದರಿಂದಲೂ ತಪ್ಪಿಸಿಕೊಳ್ಳಲು ಆಗಲಿಲ್ಲ. ನ್ಯೂಜಿಲೆಂಡ್ ಪರ ಎಜಾಜ್ ಪಟೇಲ್ 6 ವಿಕೆಟ್ ಪಡೆದು ಸಂಭ್ರಮಿಸಿದರು. ಗ್ಲೇನ್ ಫಿಲ್ಪಸ್ 3 ವಿಕೆಟ್ ಕಿತ್ತು ಸಾಥ್ ನೀಡಿದರು. ಇದರ ಪರಿಣಾಮ ತವರು ನೆಲದಲ್ಲಿಯೇ ಭಾರತ ಸರಣಿ ಸೋಲು ಅನುಭವಿಸಿತು. ಮ್ಯಾಟ್ ಹೆನ್ರಿ 1 ವಿಕೆಟ್ ಪಡೆದರು. ನ್ಯೂಜಿಲೆಂಡ್ ನ ವಿಲ್ ಯಂಗ್ ಪ್ಲೇಯರ್ ಆಫ್ ದಿ ಸಿರೀಸ್, ಎಜಾಜ್ ಪಟೇಲ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.
ಭಾರತ ಪರ ರವೀಂದ್ರ ಜಡೇಜಾ 5 ವಿಕೆಟ್ ಪಡೆದು ಸಾಧನೆ ಮಾಡಿದರು. ರವಿಚಂದ್ರನ್ ಅಶ್ವಿನ್ 3 ವಿಕೆಟ್ ಪಡೆದು ಮಿಂಚಿದರು. ಬೌಲರ್ ಗಳು ತಮ್ಮ ಉತ್ತಮ ಪ್ರದರ್ಶನ ನೀಡಿದರು. ಆದರೆ, ಬ್ಯಾಟಿಂಗ್ ಪಡೆ ಮತ್ತೆ ವೈಫಲ್ಯ ಕಂಡಿತು. ಇದರ ಪರಿಣಾಮ 3-0 ಅಂತರದಿಂದ ಭಾರತ ತಂಡ ಟೆಸ್ಟ್ ಸರಣಿ ಸೋತಿತು.