ಪ್ರಜಾಸ್ತ್ರ ವಿಶೇಷ ಲೇಖನ: ವಿಜಯಪುರ ವಾರ್ತಾ ಇಲಾಖೆಯಲ್ಲಿ ಪರೀಕ್ಷಾರ್ಥಿಯಾಗಿರುವ ವಿದ್ಯಾಶ್ರೀ ಹೊಸಮನಿ ಅವರು ಬರೆದ ಕಿರು ಲೇಖನ ಇಲ್ಲಿದೆ.
ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಕ್ತಾಯಗೊಂಡು ಫಲಿತಾಂಶ ಹೊರಗಡೆ ಬಂದಿದ್ದೆ ತಡ ಅಧಿಕ ಅಂಕ ಪಡೆದು ಉತ್ತೀರ್ಣರಾದ ಮಕ್ಕಳ ಪೋಟೋಗಳುಳ್ಳ ಬ್ಯಾನರ್ ಗಳನ್ನು ಎಲ್ಲೆಡೆ ಹಾಕುವ ಭರದಲ್ಲಿ ಕಾಲೇಜುಗಳು ನಿರತವಾಗಿದ್ದರೆ, ತಮ್ಮ ಮಕ್ಕಳು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಅನ್ನೋದನ್ನು ಹೆಮ್ಮೆಯಿಂದ ಬಂಧು-ಬಳಗ, ಸ್ನೇಹಿತರಲ್ಲಿ ಹಂಚಿಕೊಳ್ಳುತ್ತಾ ಸಿಹಿ ಹಂಚುವುದರೊಂದಿಗೆ ಮಕ್ಕಳು ಬಯಸಿದ ವಸ್ತುಗಳನ್ನು ಕೊಡಿಸುವುದರಲ್ಲಿ ಪಾಲಕರು ತೊಡಗಿದ್ದಾರೆ.
ವರ್ಷ ಪೂರ್ತಿ ಪಟ್ಟ ಶ್ರಮಕ್ಕೆ ಫಲಿತಾಂಶ ಎಂಬ ಫಲ ಪಡೆದ ಮಕ್ಕಳು ಎಲ್ಲರಿಂದ ಗೌರವ ಪಡೆಯುತ್ತಾ ಮುಂದಿನ ಶೈಕ್ಷಣಿಕ ವರ್ಷಕ್ಕೆ ಎಲ್ಲಿ ಪ್ರವೇಶ ಪಡೆದುಕೊಳ್ಳಬೇಕೆಂದು ಯೋಚಿಸುತ್ತಿದ್ದಾರೆ. ಜೊತೆಗೆ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳನ್ನು ಕೈ ಬಿಸಿ ಕರೆಯುತ್ತಿರುವ ಸಾಲು ಸಾಲು ಶಿಕ್ಷಣ ಸಂಸ್ಥೆಗಳಲ್ಲಿ ಯಾವುದು ಆಯ್ಕೆ ಮಾಡಿಕೊಳ್ಳಬೇಕು? ಗುಣಮಟ್ಟವುಳ್ಳ ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ ಅನ್ನೋ ಗೊಂದಲ ಸಹ ಇದೆ. ಇನ್ನು ಸಾಧಾರಣ ಹಾಗೂ ಕಡಿಮೆ ಅಂಕ ಪಡೆದು ಪಾಸ್ ಆಗಿರುವ ಮಕ್ಕಳು ಎಲ್ಲಾದರೂ ಸರಿ ಮುಂದಿನ ಶಿಕ್ಷಣಕ್ಕೆ ಬಾಗಿಲಾದರೂ ತೆರೆಯಿತ್ತೆಂಬ ಸಂತಸದಲ್ಲಿ ಪ್ರವೇಶ ಪಡೆದುಕೊಳ್ಳುತ್ತಿದ್ದಾರೆ.
ಇನ್ನೂ ವರ್ಷ ಪೂರ್ತಿ ಸರಿಯಾಗಿ ಓದದ, ಓದಿದ್ರೂ ಅನುತ್ತೀರ್ಣರಾದ ಮಕ್ಕಳ ಗತಿಯಂತೂ ಶಬ್ದಗಳಿಂದ ಹೇಳಲಾಗದು. ಅಂಕಗಳು ಮಕ್ಕಳ ಅರ್ಹತೆಯ ಮಾಪನವನ್ನಾಗಿ ಕಾಣುವ ಬಂಧು-ಬಳಗ, ಸ್ನೇಹಿತರುಗಳಿಂದ ಅನುತ್ತೀರ್ಣರಾದ ಮಕ್ಕಳು ಅಪಮಾನಕ್ಕೆ ಒಳಗಾಗುವುದು ಒಂದೆಡೆಯಾದರೆ, ತಂದೆ-ತಾಯಿಗಳು ಅನುತ್ತೀರ್ಣದಿಂದ ತಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕೆ ಕುತ್ತಾಗುತ್ತದೆ ಎಂದು ಕೊರಗುತ್ತಾ ಮತ್ತೊಂದು ಅವಕಾಶದಲ್ಲಾದರೂ ಉತ್ತೀರ್ಣರಾಗಲಿ ಎಂದೂ ಇನ್ನಷ್ಟು ನಿಷ್ಟುರವಾಗಿ ಮಕ್ಕಳ ಎಲ್ಲ ಮನರಂಜನೆಗೆ ಕಡಿವಾಣ ಹಾಕಿ ಓದಿಗೆ ಅವರ ಮೇಲೆ ಮತ್ತಷ್ಟು ಒತ್ತಡ ಹಾಕುವರು.
ಪರೀಕ್ಷೆಯಲ್ಲಿ ಈಗ ಅನುತ್ತೀರ್ಣರಾಗಿರಬಹುದು, ಸಿಗುವ ಮತ್ತೊಂದು ಅವಕಾಶದಲ್ಲಿ ಉತ್ತೀರ್ಣರಾಗಿ ಮುಂದೆ ಸಾಗಬಹುದು. ಈ ಪರೀಕ್ಷೆಗಳು ಕೇವಲ ಮುಂದಿನ ಶಿಕ್ಷಣಕ್ಕೆ ದಾರಿಮಾಡಿ ಕೊಡುತ್ತವೆ. ಭವಿಷ್ಯವೇ ಪರೀಕ್ಷೆಗಳಿಂದ ನಿರ್ಧರಿಸಲಾಗುವುದಿಲ್ಲ. ಕೌಶಲ್ಯ ಪ್ರತಿಭೆಗಳಿಂದ ಭವಿಷ್ಯ ಸುಂದರವಾಗಿ ರೂಪಿಸಿಕೊಳ್ಳುವರು. ಉತ್ತೀರ್ಣ-ಅನುತ್ತೀರ್ಣವಾದ ಮಕ್ಕಳೆಲ್ಲರೂ ದೇಶದ ಭವಿಷ್ಯದ ಆಸ್ತಿ ಎಂದು ಸಮಾಜ ಅಲ್ಲಗಳೆಯುವಂತಿಲ್ಲ. ಉತ್ತೀರ್ಣರಾದ ಮಕ್ಕಳಲ್ಲಿ ಒಂದು ಪ್ರತಿಭೆಯಿದ್ದರೆ, ಅನುತ್ತೀರ್ಣರಾದ ಮಕ್ಕಳಲ್ಲೂ ಒಂದು ಪ್ರತಿಭೆ ಇರುತ್ತದೆ. ಅವರ ಪ್ರತಿಭೆಗಳೆ ಮುಂದೆ ದೇಶದ ಬೆಳವಣಿಗೆಗೆ ಸಹಕಾರಿಯಾಗುತ್ತದೆ.