Ad imageAd image

ನೇರ ದಿಟ್ಟ ನಿಷ್ಠುರವಾದಿ ನಿಜಶರಣ ಅಂಬಿಗರ ಚೌಡಯ್ಯ: ಡಾ.ಗಣೇಶ ಕೃಷ್ಣ ಸುಲ್ತಾನಪುರ

Nagesh Talawar
ನೇರ ದಿಟ್ಟ ನಿಷ್ಠುರವಾದಿ ನಿಜಶರಣ ಅಂಬಿಗರ ಚೌಡಯ್ಯ: ಡಾ.ಗಣೇಶ ಕೃಷ್ಣ ಸುಲ್ತಾನಪುರ
WhatsApp Group Join Now
Telegram Group Join Now

12ನೇ ಶತಮಾನದ ಬಂಡಾಯ, ಕ್ರಾಂತಿಕಾರಿ ವಚನಕಾರರು ಅಂದರೆ ಅದು ಅಂಬಿಗರ ಚೌಡಯ್ಯ ಎಂದೇ ಜನಜನಿತವಾಗಿದೆ. ಅವರ ವಚನಗಳೇ ಇದಕ್ಕೆ ಸಾಕ್ಷಿಯಾಗಿದೆ. ಇಂತಹ ಮಹಾನ್ ವಚನಕಾರರ ಕುರಿತು ಅಖಿಲ ಭಾರತ ಕೋಲಿ ಸಮಾಜದ ಗದಗ ಜಿಲ್ಲಾಧ್ಯಕ್ಷರಾದ ಡಾ.ಗಣೇಶ ಕೃಷ್ಣ ಸುಲ್ತಾನಪುರ ಅವರು ಬರೆದ ಲೇಖನ ಇಲ್ಲಿದೆ.

ನದಿ, ಹಳ್ಳ-ಕೊಳ್ಳ, ಹೊಳೆಗಳಲ್ಲಿ ದೋಣಿ, ತೆಪ್ಪ ಸಾಗಿಸುವ ಅಂಬಿಗ ವೃತ್ತಿಯ ಚೌಡಯ್ಯ 11ರಿಂದ 12ನೇ ಶತಮಾನದ ಸಮಯಕ್ಕೆ ಹೊರ ಹೊಮ್ಮಿದ ವಚನ ಚಳುವಳಿಯ ಪ್ರಮುಖ ವಚನಕಾರನಾಗಿದ್ದಾರೆ. ಅತ್ಯಂತ ನೇರ ನಿಷ್ಠುರ ವೈಚಾರಿಕ ವಚನಗಳ ಮೂಲಕ ಮೂಢನಂಭಿಕೆ, ಡಾಂಭಿಕತನ, ಕಂದಾಚಾರ, ಮುಂತಾದವುಗಳನ್ನು ತೀವ್ರವಾಗಿ ವಿರೋಧಿಸಿದ ಕಟುವಾದ ಶಬ್ಧಗಳಲ್ಲಿ ಖಂಡಿಸಿ ನಿಜಶರಣ ಎಂಬ ಪ್ರಸಿದ್ಧಿ ಪಡೆದವರೆ ಅಂಬಿಗರ ಚೌಡಯ್ಯ.  ಸಾಮಾನ್ಯವಾಗಿ ವಚನಕಾರರು ತಮ್ಮ ಆರಾಧ್ಯ ಕುಲದೇವರುಗಳ ಅಂಕಿತನಾಮದ ವಚನ ರಚಿಸಿದ್ದರೇ ಅಂಬಿಗರ ಚೌಡಯ್ಯ ತಮ್ಮ ಹೆಸರನ್ನೇ ತನ್ನ ಅಂಕಿತನಾಮ ಮಾಡಿಕೊಂಡು ವಿಶಿಷ್ಠ-ವಿಶೇಷ ವಚನಕಾರನಾಗಿ ಅಂಕಿತನಾಮದ ಮೂಲಕವೇ ವೈಚಾರಿಕ ಪ್ರಜ್ಞೆಯನ್ನು ಅಭಿವ್ಯಕ್ತಿಗೊಳಿಸಿದ್ದಾರೆ.

ಅಂಬಿಗ ಎಂಬುವನು ನಂಬಿ ಲೋಲಾಡುವನು, ಅವನನ್ನು ನಂಬಿದರೆ ದಡ ಸೇರಿಸುವನು. ಅದಕ್ಕಾಗಿ ದಾಸರು ಅಂಬಿಗ ನಾ ನಿನ್ನ ನಂಬಿದೆ ಎಂದು ಹಾಡಿ ಹೊಗಳಿದ್ದಾರೆ. ದೋಣಿ ಅಥವಾ ತೆಪ್ಪದಲ್ಲಿ ನದಿ ಹೊಳೆ ದಾಟುವಾಗ ಅಂಬಿಗನ ಮೇಲೆ ನಂಬಿಕೆ ಇಡಬೇಕು ಎಂಬುದು ದಾಸರ ಪದದ ತಾತ್ಪರ್ಯ.

ಬಡತನಕ್ಕೆ ಉಂಬುವ ಚಿಂತೆ, ಉಂಡರೆ ಉಡುವ ಚಿಂತೆ,

ಉಡಲಾರದೆ ಇಡುವ ಚಿಂತೆ, ಇಡಲಾರದೆ ಹೆಂಡಿರ ಚಿಂತೆ,

ಹೆಂಡರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕುವ ಚಿಂತೆ,

ಬದುಕಾದರೆ ಕೇಡಿನ ಚಿಂತೆ, ಕೇಡಾದರೆ ಮರಣದ ಚಿಂತೆ,

ಇಂತೀ ಹಲವು ಚಿಂತೆಯಲ್ಲಿ ಇಪ್ಪವರನ್ನು ಕಂಡೆನು,

ಶಿವಚಿAತೆ ಇದ್ದವರನೊಬ್ಬರನೂ, ಕಾಣೆನೆಂದಾತ

ನಮ್ಮ ಅಂಬಿಗರ ಚೌಡಯ್ಯ…

ಅತಿಯಾದ ಬಡತನವಿರುವವನಿಗೆ ಯಾವಾಗಲೂ ಊಟದ ಚಿಂತೆಯು ಬೆನ್ನು ಹತ್ತಿರುತ್ತದೆ. ಎರಡು ಹೊತ್ತು ಊಟಕ್ಕೆ ಸರಿಯಾಗಿ ಸಿಗುವುದೋ ಅವನಿಗೆ ಉಡುವ ಬಟ್ಟೆಯ ಚಿಂತೆಯು ಬೆನ್ನು ಹತ್ತಿರುತ್ತದೆ. ಊಟ ಹಾಗೂ ಉಡಿಗೆಗಳು ಅಬಾಧಿತವಾಗಿ ದೊರೆತರೆ ಹಣ ಸಂಗ್ರಹಗೊಂಡರೆ ಚಿಂತೆಯು ಬೆನ್ನು ಹತ್ತುವುದು ಶೇಖರಿಸಿದ ಹಣವು ದಿನಗಳೆದಂತೆ ಹೆಚ್ಚಾದ ನಂತರ ಹೆಂಡತಿಯನ್ನು ಮಾಡಿಕೊಳ್ಳಬೇಕೆಂಬ ಚಿಂತೆಯು ಕಾಡತೊಡಗುವುದು. ಮದುವೆ ಮಾಡಿಕೊಂಡು ಹೆಂಡತಿಯು ಬಂದಳೆಂದರೆ ಮಕ್ಕಳ ಚಿಂತೆಯು ಪೀಡಿಸತೊಡಗುವುದು. ನಾಲ್ಕಾರು ಮಕ್ಕಳುಗಳಾದರೆ ಬದುಕಿನ ಬಾಳ್ವೆಯ ಹೊಸ ಚಿಂತೆಯು ಹತ್ತುವುದು. ಅಲ್ಲಿಂದ ಮುಂದೆ ಕೆಡಕಿನ ಹಾಗೂ ಮರಣದ ಚಿಂತೆಗಳು ಬೆಂಬತ್ತುವವು.

ಡಾ.ಗಣೇಶ ಕೃಷ್ಣ ಸುಲ್ತಾನಪುರ, ಲೇಖಕರು

ಈ ರೀತಿಯಾಗಿ ಮನುಷ್ಯನು ಒಂದಿಲ್ಲೊಂದು ಬಗೆಯ ಚಿಂತೆಯಲ್ಲಿ ಮಗ್ನನಾಗಿರುವುದು ಕಂಡುಬರುವುದು. ಅಂದರೆ ಮನುಷ್ಯನಿಗೆ ತನಗೆ ಯಾವುದರ ಕೊರತೆಯಿದೆಯೋ ಅಂಥದು ಬೇಕೆಂದು ಚಿಂತಿಸುವನು. ಜಗತ್ತಿನೊಳಗೆ ಎಲ್ಲಿಬೇಕಲ್ಲಿ ಸಿಗುತ್ತಾನೆ. ಆದರೆ ಸದಾಕಾಲವೂ ಶಿವನ ಚಿಂತೆಯಲ್ಲಿಯೇ ಕಾಲ ಕಳೆಯುತ್ತಿರುವಂಥ ಓರ್ವ ಮಹಾನುಭಾವರೂ ಕೂಡಾ ನನಗೆ ಕಾಣಲಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಅಂಬಿಗನು ಜಗದೊಳಗೆ ಇಂಬಿಲೋಲಾಡುವನು

ತುಂಬಿದ ಸಾಗರದೊಳಗೆ ನೋಡಯ್ಯ

ನಂದ ದೋಣಿಯನೇರಿದಂದಿನ ಹುಟ್ಟ

ಕಂಡವರಂದವ ನರಿದಾತ ತೋರಿಸುತ್ತಿದ್ದನು.

ಛಂದಗೆಟ್ಟವರೆಲ್ಲಾ ಬಂದೇರಿ ದೋಣಿಯನು

ಶಿವನೋಂದೆ ಠಾವಿಗೊಯ್ದಿಳುಹುವೆನೆಂದನಂಬಿಗರ ಚೌಡಯ್ಯ.

ಎಂದು ಅಂತಹ ಅಂಬಿಗ ನಾನಲ್ಲ ಕೇವಲ ನದಿಯನ್ನುಅಷ್ಟೇ ಅಲ್ಲ ಈ ಅಂಬಿಗನನ್ನು ಶಿವನಂಬಿದರೆ ಸಂಸಾರವೆಂಬ ಭವಸಾಗರವನ್ನೇ ದಾಟಿಸಿ ಜೀವನಕ್ಕೆ ಮುಕ್ತಿ ದೊರಕಿಸಿಕೋಡಬಲ್ಲೆ ಎಂಬ ಆತ್ಮವಿಶ್ವಾಸದ ಸ್ವಾಭಿಮಾನದ ಕಿಡಿತನ್ನ ವಚನದಲ್ಲಿ ಹೊತ್ತಿಸಿದ್ದಾರೆ. ಅಂಬಿಗರ ಚೌಡಯ್ಯನವರು ಬಸವಾದಿ ಶಿವ ಶರಣರಲ್ಲಿ ಅತ್ಯಂತ ಪ್ರಭಾವಿತನಾದ ನೇರ ನಡೆ-ನುಡಿಯ ನಿಷ್ಠುರವಾದಿ ನಿಜ ಶರಣ ಆದವರು. ಅಂಬಿಗರ ಚೌಡಯ್ಯ ತಮ್ಮ ಕುಲ ಕಸುಬಾದ ದೋಣಿ ನಡೆಸುವ ಕಾಯಕವನ್ನು ಕೈಗೊಂಡಿದ್ದಾರೆ. ಶ್ರೇಷ್ಠ ಅನುಭಾವಿ ಸಾಮಾಜಿಕ ಬದಲಾವಣೆಯ ಬಗೆಗೆ ತೀವ್ರ ಕಳಕಳಿಯುಳ್ಳ ಧ್ಯೇಯವಾದಿ. ಅಸತ್ಯ ಅನ್ಯಾಯ ಮೂಢನಂಬಿಕೆ, ಅಂಧ, ವಿಚಾರ ಆಚಾರಗಳನ್ನು ಖಂಡಿಸುವ ನಿಷ್ಠುರವಾದಿ. ಕೆಳವರ್ಗದ ಶೋಶಣೆಗೆ ಒಳಗಾದ ತನ್ನವರ ಶೋಷಿತ ನೋವಿನ ಪರಿಚಯ ಅವರಿಗೆ ಚೆನ್ನಾಗಿತ್ತು.

ಕಟ್ಟಿದ ಲಿಂಗವನು ಬಿಟ್ಟು, ಬೆಟ್ಟದ ಲಿಂಗಕ್ಕೆ ಹೋಗಿ,

ಹೊಟ್ಟಿಡಿ ಬೀಳುವ ಖೊಟ್ಟಿ ಮೂಳರ ಕಂಡಡೆ,

ಮೆಟ್ಟಿದ ಎಡ ಪಾದರಷ್ಟೆಯ ತಗೊಂಡು

ಲಟಲಟನೆ ಹೊಡೆಯೆಂದಾತ ಅಂಬಿಗರ ಚೌಡಯ್ಯ

ಅಂಬಿಗರ ಚೌಡಯ್ಯನ ಮತ್ತೊಂದು ವಚನದಲ್ಲಿ ಅಂಗದ ಮೇಲಿರುವಂತಹ ಕಟ್ಟಿಕೊಂಡಿರುವ ಲಿಂಗವನ್ನು ಬಿಟ್ಟು ಗುಡ್ಡ ಬೆಟ್ಟದ ಮೇಲೊಂದು ಕಟ್ಟಿಸಿದಂತಹ ಗುಡಿಯೊಳಗಿನ ಲಿಂಗಕ್ಕೆ ಹೊಟ್ಟೆ ಅಡಿಯಾಳಾಗಿ ಉದ್ದಕ್ಕೆ ಬಿದ್ದು ನಮಸ್ಕಾರ ಮಾಡುವವರನ್ನು ಮೂರ್ಖರು ಕಂಡರೆ ಮುಟ್ಠಾಳರೆಂದು ಟೀಕೆ ಮಾಡಿ ಅಂತಹವರನ್ನು ಎಡಗಾಲಿನ ಪಾದರಕ್ಷೆಯಿಂದ ಹೊಡೆಯಂದಾತ ಅಂಬಿಗರ ಚೌಡಯ್ಯ. ಈ ರೀತಿಯಾಗಿ ತಮ್ಮ ಹರಿತವಾದ ವಚನಗಳೊಂದಿಗೆ ಅತ್ಯಂತ ಕಟುವಾದ ಟೀಕೆಗಳನ್ನು ಮಾಡಿ ಸಮಾಜದಲ್ಲಿ ವೈಚಾರಿಕ ಕ್ರಾಂತಿ ತರಬೇಕೆಂದು ಅತ್ಯಂತ ಪ್ರಯತ್ನವಾದಿಯಾಗಿ ಶಿವಶರಣರ ಕಾಲದಲ್ಲಿ ಅಂಬಿಗರ ಚೌಡಯ್ಯ ಗೋಚರಿಸುತ್ತಾರೆ.

ಕುಲ ಹೀನ ಶಿಷ್ಯಂಗೆ ಅನುಗ್ರಹ ಮಾಡಿ,

ತಿರುಗಿ ಅವನ ಮನೆಯಲ್ಲಿ ಉಣಬಾರದೆಂದು –

ಅಕ್ಕಿ-ಕಣಕವ ತಕ್ಕೊಂಡು ಹೋಗುವ ಗುರುವಿನ ಕಂಡರೆ

ಕೆಡಹಿ ಹಾಕಿ ಮೂಗನೆ ಕೊಯ್ದು ಇಟ್ಟಂಗಿಯ ಕಲ್ಲಿಲೆತಿಕ್ಕಿ

ಸಾಸಿವೆ ಹಿಟ್ಟಿನ ತಳಿದು ಮೇಲೆ ಲಿಂಬೆಯ ಹುಳಿ ಹಿಂಡಿ

ಪಡುವಣಗಾಳಿಗೆ ಹಿಡಿ ಎಂದಾತ

ನಮ್ಮ ಅಂಬಿಗರ ಚೌಡಯ್ಯ.

ಕುಲಹೀನ ಶಿಷ್ಯನಿಗೆ ಅನುಗ್ರಹಿಸಿಅವನ ಮನೆಯಲ್ಲಿಯೇ ಊಟ ಮಾಡಲು ಇಚ್ಛಿಸದೇ, ಅಕ್ಕಿ ಕಣಕ ಮುಂತಾದವುಗಳನ್ನು ತೆಗೆದುಕೊಂಡು ಹೋಗುವ ಗುರುಗಳನ್ನು ಕಂಡರೆ ನೆಲಕ್ಕೆ ಕೆಡವಿ ಮೂಗು ಕೊಯ್ದು ಆ ಗಾಯದ ಮೇಲೆ ಇಟ್ಟಿಗೆಯಿಂದ ಬಲವಾಗಿ ಉಜ್ಜಿ ಅದರ ಮೇಲೆ ಸಾಸಿವೆ ಹಿಟ್ಟು ಉದುರಿಸಿ ನಿಂಬೆಹಣ್ಣಿನ ಹುಳಿಯನ್ನು ಹಿಂಡಿ ಪಡುವಣ ಗಾಳಿಗೆ ಹಿಡಿದು ಶಿಕ್ಷಿಸಬೇಕೆಂದು ಈ ವಚನದಲ್ಲಿ ಉಗ್ರವಾಗಿ ಆಗ್ರಹಿಸಿದ್ದಾರೆ.

ದೊಡ್ಡ ದೊಡ್ಡ ಶೆಟ್ಟಿಗಳ ಕಂಡು ಅಡ್ಡಗಟ್ಟಿ ಹೋಗಿ ಶರಣಾರ್ಥಿ

ಎಂಬ ಎಡ್ಡುಗಳ್ಳತನಕ್ಕೆ ತಮ್ಮ ಮಠಕ್ಕೆ ಬನ್ನಿ ಹಿರಿಯರೆ ಎಂಬರು

ಹೋಗಿ ಶರಣಾರ್ಥಿ, ಭಕ್ತನೆಂದೊಡೆ ಕೇಳದ ಹಾಗೆ ಅಡ್ಡಮೊರೆಯನಿಕ್ಕಿಕೊಂಡು

ಸುಮ್ಮನೆ ಹೋಗುವ ಹೆಡ್ಡ ಮೊಳರಿಗೆ ದುಡ್ಡೇ ಪ್ರಾಣವಾಯಿತ್ತು

ದುಡ್ಡಸ್ತರ ಕುರುಹನರಿಯದೆ ಮೊಳಪಾದದ ಮೇಲೆ ಹೊಡೆಹೊಡೆಕೊಂಡು

ನಗುತಿರ್ದಾತ ನಮ್ಮ ಅಂಬಿಗರ ಚೌಡಯ್ಯ

ಈ ವಚನವಂತೂ ಮಠ-ಮಾನ್ಯಗಳಲ್ಲಿನಡಾಂಭಿಕತೆ ಹಣವಂತರಿಗೆ ಮಾತ್ರ ಗೌರವಿಸುವ ರೂಢಿಸುವುದನ್ನು ಟೀಕಿಸಿ, ನಿಜ ಸಾಮಾನ್ಯ ಭಕ್ತರನ್ನು ಉಪೇಕ್ಷಿಸುವುದನ್ನು ಖಂಡಿಸುವ ಈ ವಚನವು ಅಂದು-ಇಂದು ಎಂದೆಂದಿಗೂ ಪ್ರಸ್ತುತ ಎನ್ನುವಂತೆ ಕಂಡು ಬರುತ್ತದೆ.

WhatsApp Group Join Now
Telegram Group Join Now
Share This Article