Ad imageAd image

ಶರಣ ಎಮ್.ಎನ್ ವಾಲಿ ಬಯಲಾದರು

Nagesh Talawar
ಶರಣ ಎಮ್.ಎನ್ ವಾಲಿ ಬಯಲಾದರು
WhatsApp Group Join Now
Telegram Group Join Now

ಪ್ರಜಾಸ್ತ್ರ ವಿಶೇಷ ಲೇಖನ: ಬಸವ ಪಾಟೀಲ, ಕೊಂಡಗೂಳಿ(ಯುಕೆ ನಿವಾಸಿ)

ಕ್ರಿಸ್ಮಸ್ ಹಬ್ಬದ ದಿನ ಕಾಯಕ ಮುಗಿಸಿ ಮನಿಗಿ ಬಂದು, ಭಾರತದ ಮೊಬೈಲ್ ಸಂಖ್ಯೆ ಹೊಂದಿದ, ಮೊಬೈಲನಲ್ಲಿ, ವಾಟ್ಸಪ್ ಸ್ಟೇಟಸ್ ನೋಡೊದು ರೂಢಿಯಾಗಿದೆ. ಕೆಲ ವ್ಯಯಕ್ತಿಕ ಪ್ರಾಸಸ್ಥ್ಯಗಳ ಕಾರಣದಿಂದ ಸಮಾಜಿಕ ಜಾಲತಾಣಗಳಿಂದ ದೂರ ಆಗಿರುವೆ. ದಾಸೋಹಿ ಭಾವ ಗಟ್ಟಿಯಾಗಬೇಕಾದರೆ, ಅತ್ಮಾವಲೋಕನ, ವಯಕ್ತಿಕ ಸಮಯ, ಸಂಸಾರ ಇವು ಬುನಾದಿಯಾಗಬೇಕು. ಆಗಲೆ ವೈಚಾರಿಕ ಗಟ್ಟಿತನದ ರಾಶಿಮಾಡಬಹುದು. ಅನ್ನುವ ತಿಳುವಳಿಕೆ, ಬಸವ ಭೀಮರ ತತ್ವ ಅರಿವು ಮೂಡಿಸಿದೆ. ಅದಕ್ಕ ತಟಕ, ಸಮಾಜಿಕ ಜಾಲತಾಣಗಳಿಂದ ದೂರ. ನನ್ನಲ್ಲಿ ಹುದುಗಿರುವದು ಬಂಡಾಯದ ತತ್ವ, ಸರ್ಕಾರಗಳ ಹೊಗಳು ಭಟ್ಟ ಅಥವಾ ಪಟ್ಟ ಭದ್ರ ಹಿತಾಸಕ್ತಿಗೆ ಈಡಾಗದಿರಲಿ ಈ ಜೀವ ಅಂತ ತಟಕ ನಿಯಂತ್ರಣ ಮಾಡಿಕೊಂಡಿರುವೆ, ಇರಲಿ.

ಈ ಹೊತ್ತಿನ ಆಘಾತ, ಕಳಕೊಂಡ ಭಾವ, ಕೂಡಿಕೊಂಡ ನೆನಪು, ಬಯಲಾದ ಜೀವದ ಮಹಾದೋಸಹಿ ತತ್ವ ಆವರಿಸಿಕೊಂಡಾದ. ಅದು ಅಕ್ಷರ ಆಗಿ ಮೂಡಿ ಬರಲಕ್ಕತ್ತಾದ. ಅದನ್ನ ತಾವು ಓದತಾ ಇದ್ದೀರಿ! ಲಿಂಗಾಯತರಲ್ಲಿ, ಐಕ್ಯ ಆಗೋದು ಭ್ರಮಿತ ಕಲ್ಪನೆಯಲ್ಲ. ವಿಧಿವಶ ಅಲ್ಲ, ಸಮಾಧಿಯಲ್ಲ, ಅದು ಬಯಲಾದ ಸ್ಥಿತಿ. ಅದು ನಮಗೆ ಖಚಿತವಾದ ಐಕ್ಯ ಸ್ಥಳ. ಅದು ನಿರ್ಭಾವ, ನಶಿಸಿ ಹೋಗೊ ಮಾತಲ್ಲ. ಅದು ಬಯಲಾದ ಸ್ಥಿತಿ. ‘ಮರಣವೆ ಮಾಹನವಮಿ’ ಅನ್ನುವ ಕ್ರಾಂತಿಕಾರ ಮನಸ್ಸು. ಆಕಾರ ನಿರಾಕಾರವಾಗುವ ತತ್ವ. ಅದರಾಗೇನರೆ ಆತ್ಮ ಬಯಲಾಗಿ, ಪ್ರಸಾದ ಕಾಯವನ್ನ, ‘ಜಂಗಮಕ್ಕೆ’ (ಸಮಾಜ, ಚಿಂತನಶೀಲ ವ್ಯವಸ್ಥೆಗೆ) ಅರ್ಪಿಸಿದರೆ, ತಾವು ಮಹಾದಾಸೋಹಿನೆ. ಐಕ್ಯಸ್ಥಳ ಅನುಭೂತಿಯಾದರೆ ಮಾತ್ರ ನನ್ನ ದೇಹವನ್ನ ಅಭ್ಯಾಸಕ್ಕ ಕೊಡರಿ ಅನ್ನುವ ನಿಲುವು ಏನ ಹೇಳತಾರಲ್ಲ ಅವರು ಲಿಂಗಾಯತರು ಆಗ್ಯಾರ ಅಂತ ನನ್ನ ಸಣ್ಣ ವ್ಯಾಖ್ಯಾನ, ಸಾಕ್ಷಿ ವಚನ ಸಾಹಿತ್ಯ.

ಎರಡು ಪ್ಯಾರಾ ಓದಿದ ಮ್ಯಾಲ, ಏನರೆ ಹೇಳಲಕ್ಕ ಹೊಂಟಾನ ಇಂವ ಅಂತ ಅವಸರ ಮಾಡಿ, ರೀಲ್ಸ್ 10 ಸೆಕೆಂಡನ್ಯಾಗ ಮ್ಯಾಲಿ ಎತ್ತಿ ಹಾಕದಾಂಗ ಹೆಬ್ಹೆಟ್ಟಲೆ ಸರಸ ಬ್ಯಾಡರಿ ಓದರಿ. ಡಾ.ಎಮ್.ಎನ್ ವಾಲಿಯವರು ವಿಧಿವಶರಾದರು ಅಂತ ಅವರ ಮೊಮ್ಮಗ ಪ್ರಸಾದ ವಾಲಿಯವರ ಸ್ಟೇಟಸ್ ಓದಿದೆ. ಶರಣ ಸಾಹಿತಿ ಎಮ್.ಎನ್ ವಾಲಿಯವರು, ವಿಧಿವಶ ಆಗಲೂ ಸಾದ್ಯವೆ ಇಲ್ಲ. ಅದ್ಯಾಂಗ ಅಂತ 5 ಸೆಕೆಂಡ್ ಮನಸ್ಸ ಇಲ್ಲದ ಭಾವ ಪರ್ಸೀವ ಮಾಜೋಟಿಗೆ, ಪ್ರಸಾದ ಅವರ ಸ್ಥಿತಿಯ ಇನ್ನೊಂದು ಚಿತ್ರ ಕಾಣತು, ಆಗ ಮನಸ್ಸ, ಬಯಲಾದ ಜೀವಕ್ಕ ಶರಣೆನ್ನುವ ಭಾವ ಮೂಡಿತು. ಎರಡನೆ ಚಿತ್ರದ ‘ಸ್ತಿಥಿಯ ಕೆಳಬರಹ’ ಏನಿತ್ತು ಗೊತ್ತಾ? ಅದು ಇಂಗ್ಲೀಷನಲ್ಲಿ, (Donated his soul (body) as per his wish, miss you ajja ri) ಅದಕ್ಕ ಅವರ ಸ್ತಿಥಿಗೆ ಹಿಂಗ ಬರದ್ಯಾ “ದಾಸೋಹಿ ಮಹಾ ದಾಸೋಹಿಯಾದ ಘಳಿಗೆ ಬಯಲ ಬಿತ್ತಿ ಬಯಲ ಬೆಳೆದ ಭಾವ ಇಂತಹ ವಿಭೂತಿ ಪುರುಷರನ್ನ ಭೇಟಿಯಾಗಿಸಿದ್ದು. ನೀವು ನಿಮಗೆ ಬಸವಾದಿ ಶರಣರ ಆಶಯದ ಹಾರೈಕೆ ಸದಾ ಇರಲಿ. ಶರಣರ ಗುಣ ಮರಣದಲ್ಲಿ ಮಹಾನವಮಿ ಕಂಡವರು. ಬಯಲಾದ ಜೀವಕ್ಕ ಶರಣು.

ಡಾ.ಎಮ್.ಎನ್ ವಾಲಿಯವರ ಸಾಹಿತ್ಯದ ಪರಿಚಯ ಇಲ್ಲ, ಸಮಯ ವಿನಿಯೋಗಿಸಿ ಪ್ರಯತ್ನ ಪಟ್ಟಿಲ್ಲ. ಈ ತಪ್ಪಿಗಿ ಕ್ಷಮೆ ಕೋರುವೆ. ಆದರೆ ಅವರಿಗಿ ಭೇಟಿಯಾಗಿನಿ ಅವರೊಂದಿಗೆ ವೇದಿಕೆ ಹಂಚಿಕೊಂಡೀನಿ. ಅವರ ಶರಣತ್ವದ ಭಾವಕ್ಕ ಶರಣಾಗೀನಿ. ಭೇಟಿಯಾದ ಮಾತನಾಡಿದ ಭಾವ ಮಾತ್ರ ಅಚ್ಚಳಿಯದ ನೆನಪು ಯಾಕಂದರ ನೆನಪಿಗಿ ಸಾವಿಲ್ಲ ನೋಡರಿ. ನನಗ ಡಾ.ಅಶ್ವೀನ ನಾಯಕ ಅವರು, ಒಂದು ಅಂತರಾಷ್ಟ್ರೀಯ ಮಟ್ಟದ ‘ಜಾಗತಿಕ ಘನತೆ’ ಸಂಸ್ಥೆಯಿದೆ. ಅದ್ಕ ನಾ ಭಾರತದ ಚೇರ್ಮನ್ ಅದೀನಿ. ಬಿ.ಜೆ ಪಾಟೀಲ(ನನಗ ಅವರು ಬಿಜೆ ಅಂತಾನೆ ಕರಿತಾರ) ನೀನು ವಿಜಯಪೂರದಲ್ಲಿ ಈ ಸಂಸ್ಥೆಯ ಆಶೋತ್ತರ ಅನುಗುಣವಾಗಿ ಕಾರ್ಯಕ್ರಮ ಮಾಡು ಅಂದರು. ಅದ್ಕ ನಾನು ಬಿಜಾಪೂರದಾಗ ಹಳಿ ಮಂದಿ ಜೋಡಿ ಗುದ್ದಾಡುಕಿನ್ನ, ಹೊಸತನದ ಯುವಕರ ಜೊತೆ ಒಡನಾಡದು ಚಲೊ ಅಂತ ಹಲುವಾರು ಯುವಕ/ಯುವತಿಯರ ಸಂಘ ಕಟ್ಟಿ, ಒಂದು ಕಾರ್ಯಕ್ರಮ ಮಾಡೋಣ ಅಂತ ತಯ್ಯಾರಿ ಮಾಡದಿವಿ. ಆಗೀನ ವಿಜಯಪೂರ ಜಿಲ್ಲೆಯ ವಿಜಯ ಕರ್ನಾಟಕದ ಸಂಪಾದಕರಾದ ಶರಣ ಉಮೇಶ ಭಟ್ಟ ಅವರ ಸಹಯೋಗದೊಂದಿಗೆ ಕಾರ್ಯಕ್ರಮ ತಯ್ಯಾರಿಯಾಯಿತು. ನಾನು ಯಾವ ಸಂಸ್ಥೆಯಿಂದ ಸಹಾಯ ಬಯಸಿದನೊ ಆ ಸಂಸ್ಥೆಯಿಂದ ಆಪೇಕ್ಷಿತಕಿನ್ನ ಕಡಿಮೆ ಪ್ರತಿ ಸ್ಪಂದನೆ ಸಿಕ್ಕತು. ಆ ಆಶಯವನ್ನ ಈಡೇರಿಸಿದದು ನಮ್ಮ ಸೀಕ್ಯಾಬ್ ಸಂಸ್ಥೆ. ಅದಕ್ಕ ಕಾರಣ ನಯೀಮ್ ಕಲಬುರ್ಗಿಯವರ ನಾಯಕತ್ವ. ಅವರಿಂದ ಸಿಕ್ಯಾಬ್ ಸಂಸ್ಥೆಯ ಆವರಣದಲ್ಲಿ ಜಾಗ ಸಿಕ್ಕತು. ಇನ್ನ ಮುಖ್ಯ ಅತಿಥಿಗಳು ಬೇಕಾಗೀತು. ಒಬ್ಬರ ಸಾಹಿತಿಗಳು/ಇತಿಹಾಸಕಾರರ ಮನಿಗಿ ಹೋಗಿದ್ದೀವಿ ಅವರು ಭಾಳ ಅಡ್ಣಾಡಿ ಮಾತ ನನಗ ಇಷ್ಟ ಆಗಲಿಲ್ಲ. ಅದಕ್ಕ ಪ್ರಸಾದ ವಾಲಿಯವರ ಅವರ ಅಜ್ಜನ ಹೆಸರ ಹೇಳಿದರು. ಆಗ ಭೇಟಿಯಾಗಿದ್ದು ಇವತ್ತು ಬಯಲಾದ ಶರಣ ಎಮ್.ಎನ್ ವಾಲಿಯವರ ಪರಿಚಯ!

ಶರಣು ಶರಣಾರ್ಥಿ ಶರಣರ, ನಿಮಗ ಕ್ಷಮೆ ಕೋರುತ್ತಾ ನಾಳೆ ಕಾರ್ಯಕ್ರಮಕ್ಕ ನೀವು ಬರಬೇಕು, ಜಿಲ್ಲಾಧಿಕಾರಿಗಳು ಮತ್ತು ವಿಶ್ವ ವಿದ್ಯಾಲಯದ ಉಪ ಕುಲಪತಿಗಳು ಮತ್ತು ಅಹ್ವಾನಿತರು ಬರತಾ ಇದಾರೆ ಅಂದರೆ, ಥಟ್ಟನೆ ನಾ ಬರತೀನರಿ ಬಸವಾ ಅವರೆ, ಏನ ವಿಷಯ? ಅಂದರು. ಕಾಯಕದಲ್ಲಿ ಘನತೆ ಅಂದ್ಯಾ, ಅದಕ್ಯಾಕ ಚಿಂತಿ ಮಾಡತಿರಿ, ನಾ ಬರತೀನಿ ತಗೋರಿ. ಎಷ್ಟೊತ್ತಿಗಿ ಬರಬೇಕು ಅಂತ ಕೇಳಿದರು. ಆ ಸಮಯಕ್ಕ ಆದ ಪರಮಾನಂದ ಇಲ್ಲಿತನ ಕಣ್ಣಿಗ ಕಟ್ಟಿಟ್ಟಂಗ ಹಂಗಾ. ಮುಂದ ಸಿಕ್ಯಾಬ್ ಚೇರ್ಮನ್ನರು ಮತ್ತು ವಾಲಿ ಶರಣರು ಒಬ್ರಿಗೊಬ್ಬರು ಆಲಿಂಗನ ಮಾಡಿ ಕೈ ಕೈ ಹಿಡಿದುತೊಂಡು ಯುವಕರು ಮಾಡಿದ ಕಾರ್ಯಕ್ರಮಕ್ಕೆ ಸಾಕ್ಷಿಯಾದ ನನ್ನ ಮನಃ ಇನ್ನು ಪುಳಕಿತ. ಅದಕ್ಕ ಇನ್ನ ರಾತ್ರಿ 12 ಆದರೂ ಮನಸ್ಸ ಕೈ ಎರಡು ಬಯಲಾದ ಜೀವಕ್ಕ ನುಡಿ ನಮನ ಬರಿತಾ ಅದಾವ. ಮಹಾದಾಸೋಹಿ ಶರಣ ಡಾ.ಎಮ್.ಎನ್ ವಾಲಿಯವರೆ, ನಡೆ ನುಡಿ ಒಂದಾಗಿಸಿದ ಬಸವ ನಾಡಿನ ಅಕ್ಷರ ದಾಸೋಹಿ. ಜೀವ ದಾಸೋಹಿ. ನಿಮ್ಮ ಇರುವಿಕೆಯ ಅಮರಣ, ಮಹಾನವಮಿ.

WhatsApp Group Join Now
Telegram Group Join Now
Share This Article