Ad imageAd image

ಕರಿಹಲಗೆಯ ಹಿಂದೆ ಕರಗುತ್ತಿವೆ ಕಾಯಗಳು…

Nagesh Talawar
ಕರಿಹಲಗೆಯ ಹಿಂದೆ ಕರಗುತ್ತಿವೆ ಕಾಯಗಳು…
WhatsApp Group Join Now
Telegram Group Join Now

ಪ್ರಜಾಸ್ತ್ರ ವಿಶೇಷ ಲೇಖನ, ಜಯಲಕ್ಷ್ಮಿ.ಕೆ, ಉಪನ್ಯಾಸಕರು, ಲೇಖಕರು(ಮಡಿಕೇರಿ)

ಆಡಳಿತದ ಚುಕ್ಕಾಣಿ ಹಿಡಿದವರ ರಾಜಕೀಯ ಅಸ್ಥಿರತೆ, ಶ್ರೀಮಂತ ಮನೆತನದ ಮದುವೆ ವೈಭವ, ಕಪಟತನದಲ್ಲಿ ಹಣ ಗಳಿಸಿದವರ ವಿಲಾಸೀ ಬದುಕಿನ  ವೈಭವೀಕರಣ, ಚಲನಚಿತ್ರನಟ ನಟಿಯರ ಹುಟ್ಟು ಹಬ್ಬದ ವೈಭವ, ಅಲ್ಲಿ ಇಲ್ಲಿ ನಡೆದ ಅನಾಚಾರಗಳು… ಹೀಗೆ ಒಂದೇ.. ಎರಡೇ… ಸಾವಿರಾರು ಸುದ್ದಿಗಳು ನೂರೆಂಟು  ಪ್ರತಿಭಟನೆಗಳು…. ಪ್ರತಿದಿನ ಸುದ್ದಿಯಾಗುತ್ತಲೇ ಇರುತ್ತವೆ. ಹಾಗೇ ವರ್ಷಕ್ಕೆ ಒಂದು  ದಿನ ಶಿಕ್ಷಕರನ್ನು ಸ್ಮರಿಸುವ ಶಿಕ್ಷಕರ ದಿನಾಚರಣೆಯ ಸುದ್ದಿಯೂ ಬರುತ್ತದೆ.

ಒಂದು ದೇಶದ ಅಭಿವೃದ್ಧಿಯ ಅಡಿಗಲ್ಲು ಶಿಕ್ಷಣ. ಅಮ್ಮನ ಮಡಿಲಿನಿಂದ ಶಿಕ್ಷಕರ  ಮಡಿಲಿಗೆ ಬರುವಂತಹ   ಮಕ್ಕಳಿಗೆ ಅಕ್ಷರಾಭ್ಯಾಸ  ಮಾಡಿಸಿ, ಅವರ ಸಮಸ್ಯೆಗಳನ್ನು ಆಲಿಸಿ, ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಅವರನ್ನು ತಿದ್ದಿ ತೀಡುವ  ಗುರುವೃಂದದವರನ್ನು ಸ್ಮರಿಸಿ, ಗೌರವಿಸಿ, ಶ್ಲಾಘಿಸುವುದಕ್ಕಾಗಿ ವರ್ಷದ ಒಂದು ದಿನವನ್ನು ಮೀಸಲಾಗಿರಿಸಲಾಗಿದೆ. ಆ ದಿನವೇ ಸೆಪ್ಟೆಂಬರ್ 5.” ನಿಮ್ಮ ಹುಟ್ಟುಹಬ್ಬವನ್ನು  ಅದ್ದೂರಿಯಾಗಿ ಆಚರಿಸುತ್ತೇವೆ”  ಎಂದುಕೊಂಡು ತಮ್ಮ ಬಳಿಗೆ ಬಂದ ಉತ್ಸಾಹಿ ವಿದ್ಯಾರ್ಥಿ ತಂಡವನ್ನು ಕುರಿತು” ನನ್ನೊಬ್ಬನ ಹುಟ್ಟುಹಬ್ಬವನ್ನು ಆಚರಿಸುವ ಬದಲಾಗಿ ದೇಶದ ಯುವಶಕ್ತಿಯನ್ನು ರೂಪಿಸುವಂತಹ  ಇಡೀ ದೇಶದ ಶಿಕ್ಷಕರನ್ನು ಗೌರವಿಸುವ ಸಲುವಾಗಿ ಈ ದಿನದ ಆಚರಣೆಯಾಗಲಿ” ಎಂದ  ಖ್ಯಾತ ಶಿಕ್ಷಕ  ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹೃದಯವಂತಿಕೆಯ ಫಲವಾಗಿ  1962 ರಿಂದ   ಶಿಕ್ಷಕರ ದಿನಾಚರಣೆ ಆರಂಭವಾಯಿತು. ಪಠ್ಯ ಪಠ್ಯೇತರ ಚಟುವಟಿಕೆಗಳ ಜೊತೆಗೆ  ನೈತಿಕ ಮೌಲ್ಯಗಳನ್ನು ಬೋಧಿಸಿ ಮಕ್ಕಳ ಭವಿತವ್ಯವನ್ನು ರೂಪಿಸುವ ಶಿಕ್ಷಕರಿಗೆ ಈ ದಿನಾಚರಣೆ  ಬಹಳ ಹೆಮ್ಮೆಯ ವಿಚಾರ.

“ಪ್ರತಿಯೊಬ್ಬ ಸಾಧಕನ ಹಿಂದೆ ಆದರ್ಶ ಗುರುವಿದ್ದಾನೆ”. ಮಕ್ಕಳಿಗೆ ಜ್ಞಾನವನ್ನು ನೀಡುವುದರ ಜೊತೆಗೆ ಬದುಕುವ ಕಲೆಗಾರಿಕೆಯನ್ನು ಕಲಿಸುವವರು ಶಿಕ್ಷಕರು. ಶಿಕ್ಷಣದ ಜೊತೆ ಜೊತೆಗೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವವರು ಶಿಕ್ಷಕರು. ಮಕ್ಕಳಲ್ಲಿ ಆತ್ಮಸ್ಥೈರ್ಯವನ್ನು ತುಂಬಿ ಅವರನ್ನು ಭವಿಷ್ಯಕ್ಕೆ ಅಣಿಗೊಳಿಸುವ ಹೊಣೆಗಾರಿಕೆಯನ್ನು ಚೊಕ್ಕವಾಗಿ ನಿಭಾಯಿಸುವವರು ಶಿಕ್ಷಕರು. ಮಕ್ಕಳಲ್ಲಿ ವಿಮರ್ಶಾತ್ಮಕ ಚಿಂತನೆಗಳನ್ನು ಹುಟ್ಟು ಹಾಕಿ ಅವರ ಬೌದ್ಧಿಕ ಬೆಳವಣಿಗೆಗೆ ಸಹಕರಿಸುವವರು ಶಿಕ್ಷಕರು. ಮಕ್ಕಳನ್ನು ನಾಳಿನ ಜವಾಬ್ದಾರಿಯುತ ಪ್ರಜೆಗಳನ್ನಾಗಿಸುವಲ್ಲಿ ಶಿಕ್ಷಕರ ಪಾತ್ರ ಅಪಾರವಾದದ್ದು. ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿ, ಅವರಿಗೆ ಪ್ರೋತ್ಸಾಹ ನೀಡಿ ಅವರನ್ನು ಸದಾ ಕ್ರಿಯಾಶೀಲರನ್ನಾಗಿರಿಸುವ ಕಲೆಗಾರಿಕೆ ಶಿಕ್ಷಕರಲ್ಲಿದೆ.

“ಭಾರತದ ಭವಿಷ್ಯ ನಿರ್ಮಾಣವಾಗುವುದು ಶಾಲಾ ಕೊಠಡಿಗಳಲ್ಲಿ: ನಿರ್ಮಾತೃಗಳೇ ಶಿಕ್ಷಕರು” ಎನ್ನುವ ಮೂಲಕ ಡಾ. ಎ  ಪಿ ಜೆ ಅಬ್ದುಲ್ ಕಲಾಂ ರವರು ಶಿಕ್ಷಕರ ಕಾಯಕಕ್ಕೆ  ಒಂದು ಅದ್ಭುತ ಸ್ಥಾನಮಾನವನ್ನು ನೀಡಿದ್ದಾರೆ. ಇಂತಹ ಗುರುತರ ಜವಾಬ್ದಾರಿಯನ್ನು ಹೊತ್ತ ಶಿಕ್ಷಕ ಸಮುದಾಯಕ್ಕೆ ಇಂದು ಹಲವಾರು ಸವಾಲುಗಳನ್ನು ಎದುರಿಸಿ ಬಾಳಬೇಕಾದ ಅನಿವಾರ್ಯತೆ ಇದೆ. ಸರಕಾರದಿಂದ ನಿಯೋಜಿತಗೊಂಡ ಶಿಕ್ಷಕರಿಗೆ ಬೋಧನಾ ಕಾರ್ಯಗಳಿಗಿಂತ  ಬೋಧನೇತರ ಕೆಲಸ ಕಾರ್ಯಗಳ ಹೊರೆ ಹೆಚ್ಚಾಗಿ ಅವರ ಅಸಹಾಯಕತೆ ಒಂದೆಡೆಯಾದರೆ ಖಾಸಗಿ ಶಾಲಾ ಶಿಕ್ಷಕರ ಸಂಕಷ್ಟಗಳು ಇನ್ನೊಂದೆಡೆ. ಕನಿಷ್ಠ ವೇತನ ಪಡೆದು ದುಡಿಯುವ ಇವರು ಗರಿಷ್ಠ ಪ್ರಮಾಣದ ಫಲಿತಾಂಶವನ್ನು ತರುವವರಾದರೂ   ಇವರ ಸಂಕಟವನ್ನು ಕೇಳುವವರಿಲ್ಲ.   ಕಡಿಮೆ ವೇತನ, ಉದ್ಯೋಗದ ಅಭದ್ರತೆ, ಅಧಿಕ ಕೆಲಸಗಳ ಒತ್ತಡ, ಮಕ್ಕಳ ಅನುಚಿತ ವರ್ತನೆ ತಿದ್ದುವಲ್ಲಿ ಸ್ವಾತಂತ್ರ್ಯದ ಕೊರತೆ, ಮೌಲ್ಯಗಳನ್ನು ಕಡೆಗಣಿಸಿ ಉತ್ತೀರ್ಣತೆಗೆ ನೀಡುತ್ತಿರುವ ಆದ್ಯತೆ, ಆಡಳಿತ ಮಂಡಳಿ ಮತ್ತು ಪೋಷಕರ ನಡುವೆ ನಲುಗಿ ಹೋಗುತ್ತಿರುವ ಬದುಕು, ಕಾರ್ಯದಕ್ಷತೆಗೆ ಸಲ್ಲದ ಗೌರವ.. ಇತ್ಯಾದಿಗಳಿಂದ ಅದೆಷ್ಟೋ ಶಿಕ್ಷಕ ಶಿಕ್ಷಕಿಯರು ಅತ್ತ ನಿರಾಳವಾಗಿ ಕೆಲಸವನ್ನೂ ಮಾಡಲಾಗದೆ, ಕೆಲಸ ಬಿಟ್ಟು ನಿರುದ್ಯೋಗಿಗಳಾಗಿ ಬದುಕು ಸಾಧಿಸಲೂ ಸಾಧ್ಯವಾಗದೆ ಕೊರಗುತ್ತಾ ಅತಂತ್ರ ಸ್ಥಿತಿಯಲ್ಲಿ ಇರುವಂತಾಗಿದೆ. ಆದರೂ ಉತ್ತಮ ಫಲಿತಾಂಶಕ್ಕಾಗಿ ಹೆಣಗಾಡುವ ಈ ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಎಂದಿಗೂ ಮರೆತಿಲ್ಲ ಎನ್ನುವುದಕ್ಕೆ ಖಾಸಗಿ ಶಾಲಾ ಕಾಲೇಜುಗಳು ನೀಡುವ ಫಲಿತಾಂಶವೇ ಸಾಕ್ಷಿ. ಪೋಷಕರ ನಿರೀಕ್ಷೆ , ಆಡಳಿತ ಮಂಡಳಿಯ ಒತ್ತಡ,  ವಿದ್ಯಾರ್ಥಿಗಳ ಅಸಹಕಾರ ಇವೆಲ್ಲವುಗಳ ನಡುವೆ  ಎಂತಹ ವಿಷಮ ಪರಿಸ್ಥಿತಿಗಳೇ ಎದುರಾದರೂ ವಿದ್ಯಾಸಂಸ್ಥೆಗಳಿಗೆ ನಿಷ್ಠರಾಗಿ , ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಶಕ್ತಿ ಮೀರಿ ಶ್ರಮಿಸುವ  ಇಂತಹ ಶಿಕ್ಷಕ ಸಮುದಾಯವನ್ನು ಸಮಾಜ ಮತ್ತು ಸರಕಾರ ಗುರುತಿಸಬೇಕಾಗಿದೆ. ಕರಿ ಹಲಗೆಯ ಹಿಂದೆ  ನಲುಗಿ  ಹೋಗುತ್ತಿರುವ ಇಂತಹ ಶಿಕ್ಷಕ ಶಿಕ್ಷಕಿಯರ ಸಂಕಷ್ಟಗಳಿಗೆ ಸಮಾಜ ಮತ್ತು ಸರಕಾರ ಮಿಡಿಯಬೇಕಿದೆ. ಒಳಗೊಳಗೇ  ತಮ್ಮ ನೋವನ್ನು ನುಂಗಿ ಬದುಕುತ್ತಿರುವ ಇಂತಹ  ಶಿಕ್ಷಕ ವೃಂದದ ಮೌನರೋದನಕ್ಕೆ  ಸಂಬಂಧಪಟ್ಟವರಿಂದ ಪರಿಹಾರ ಬೇಕಿದೆ. ” ಶಿಕ್ಷಕ ವೃತ್ತಿ ಪವಿತ್ರವಾದದ್ದು”,”ವೈದ್ಯನಿರಲಿ, ಇಂಜಿನಿಯರ್ ಇರಲಿ,ವಿಜ್ಞಾನಿ ಇರಲಿ, ಯಾವ ಪ್ರತಿಷ್ಠಿತ ಸ್ಥಾನವನ್ನು ಅಲಂಕರಿಸಿದವನೇ ಆಗಿರಲಿ, ಅವರ ಅರ್ಹತೆಯ ಆಧಾರ ಸ್ತಂಭ ಶಿಕ್ಷಕ”, “ಶಿಕ್ಷಕರು ಜ್ಞಾನದ ಕಿಟಕಿಗಳು “, ಯುವಶಕ್ತಿಯನ್ನು ಮುನ್ನಡೆಸುವ ಜ್ಞಾನ ದೀವಿಗೆಗಳೇ ಶಿಕ್ಷಕರು”, ಮುಂತಾದ ಶ್ಲಾಘನೆಗಳಷ್ಟೇ  ಸಾಕಾಗುವುದಿಲ್ಲ. ಕೇವಲ ಅಷ್ಟರಿಂದಲೇ   ಶಿಕ್ಷಕರ ಬದುಕು ಸುಸೂತ್ರವಾಗಿ ಸಾಗದು. ಏಕೆಂದರೆ  ಹೊಗಳಿಕೆ   ಹೊಟ್ಟೆ ತುಂಬಿಸುವುದಿಲ್ಲ.

ರಾಷ್ಟ್ರ ನಿರ್ಮಾಪಕರೆನಿಸಿದ ಶಿಕ್ಷಕ ಸಮುದಾಯದ ಸಾಮಾನ್ಯ ಸಮಸ್ಯೆಗಳಿಗೆ ಮಾನವೀಯ ನೆಲೆಗಟ್ಟಿನಲ್ಲಿ ಪರಿಹಾರ ದೊರೆಯಬೇಕಿದೆ. ಕಪ್ಪು ಬಾವುಟ ಹಿಡಿದು ಪ್ರತಿಭಟನೆ ಮಾಡದಿದ್ದರೂ, ಸುದ್ದಿಗೋಷ್ಠಿಗಳಲ್ಲಿ ಗೋಳಾಡದಿದ್ದರೂ, ಅವರಿಗೂ ಒಂದು ಬದುಕಿದೆ, ಆ ಬದುಕಿಗೆ ಒಂದಿಷ್ಟು ಕನಿಷ್ಠ ಬೇಡಿಕೆಗಳಿವೆ,  ಎಂಬುದು ಸರಕಾರಕ್ಕೆ ಮನವರಿಕೆಯಾಗಿ ಈ ನಿಟ್ಟಿನಲ್ಲಿ ಖಾಸಗಿ ಶಾಲೆಗಳಲ್ಲಿ ದುಡಿಯುತ್ತಿರುವ ಶಿಕ್ಷಕ ವೃಂದಕ್ಕೆ ಸಹಕಾರ ನೀಡುವ ಬಗೆಗಿನ ನೀತಿ -ನಿಯಮಗಳನ್ನು, ಸರಕಾರ ಕಾರ್ಯಗತಗೊಳಿಸಿದರೆ ಭವ್ಯ ಭಾರತದ ನಾಳಿನ ಪ್ರಜೆಗಳನ್ನು ರೂಪುಗೊಳಿಸುವ ಶಿಕ್ಷಕ ವೃಂದಕ್ಕೆಲ್ಲಾ ಸಂತಸವಾದೀತು, ಶಿಕ್ಷಕರ ದಿನಾಚರಣೆಗೊಂದು ವಿಶಿಷ್ಟ ಅರ್ಥ ಬಂದೀತು.

WhatsApp Group Join Now
Telegram Group Join Now
Share This Article