ಪ್ರಜಾಸ್ತ್ರ ಸುದ್ದಿ
ಚಿಕ್ಕಮಗಳೂರು(Chikkamagaloru): ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಮಲೆನಾಡಿನಲ್ಲಿ ಹಲವು ಅನಾಹುತಗಳು ನಡೆಯುತ್ತಿವೆ. ತಾಲೂಕಿನ ಕೈಮರ ಹತ್ತಿರ ಬೃಹತ್ ಮರವೊಂದು ರಸ್ತೆಗೆ ಬಿದ್ದಿದೆ. ಇದರಿಂದಾಗಿ ದತ್ತಪೀಠ, ಮುಳ್ಳಯ್ಯನಗಿರಿ ಸಂಚಾರ ಬಂದ್ ಆಗಿದೆ. ಇದರಿಂದಾಗಿ ಹಿರೇಕೊಳಲೆ ಮೂಲಕವಾಗಿ ನಗರಕ್ಕೆ ಹೋಗಬೇಕಾಗಿದೆ.
ರಾತ್ರಿ ಇಡೀ ಸುರಿದ ಮಳೆಯಿಂದ ನಸುಕಿನಜಾವದಲ್ಲಿ ಬೃಹತ್ ಮರ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳೀಯರು, ಕಾರ್ಮಿಕರು ಸಹ ಸಂಚಾರವಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ಕೊಟ್ಟಿದ್ದು, ಮರ ತೆರವುಗೊಳಿಸುವ ಕೆಲಸ ನಡೆದಿದೆ.