ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ
ಮಡಿಕೇರಿಯ ಸಂತ ಜೋಸೆಫರ ಕಾಲೇಜಿನ ಉಪನ್ಯಾಸಕಿ, ಲೇಖಕಿ ಜಯಲಕ್ಷ್ಮಿ.ಕೆ ಅವರು ಅನಿಲ್ ಎಚ್.ಟಿ ಅವರ ‘ಮಡಿಕೇರಿ ದಸರಾ ಜನೋತ್ಸವ’ ಪುಸ್ತಕದ ಕುರಿತು ಬರೆದ ಲೇಖನ ಇಲ್ಲಿದೆ.
ಯಾವ ಕೃತಿ ಒಂದು ನಾಡಿನ ಜೀವ-ಜೀವಾಳವೆನಿಸಿದ ಸಂಸ್ಕೃತಿಯ ಸಾರ ಸತ್ವವನ್ನು ತನ್ನೊಳಗೆ ಹುದುಗಿಸಿಟ್ಟುಕೊಂಡಿರುತ್ತದೆಯೋ ಅದು ಸರ್ವ ಕಾಲಕ್ಕೂ ಸಂಗ್ರಹಯೋಗ್ಯ ಕೃತಿ ಎನಿಸುತ್ತದೆ. ಈ ನಿಟ್ಟಿನಲ್ಲಿ ಸೃಜನಶೀಲ ಪತ್ರಕರ್ತ, ಖ್ಯಾತ ಬರಹಗಾರ ಹಾಗೂ ಸಂಸ್ಕೃತಿ ಚಿಂತಕ ಅನಿಲ್ ಎಚ್.ಟಿ ಅವರ ‘ಮಡಿಕೇರಿ ದಸರಾ-ಜನೋತ್ಸವ’ ಕೃತಿ ಮಡಿಕೇರಿಯ ದಸರಾದ ಸಂಪೂರ್ಣ ಚಿತ್ರಣವನ್ನು ನೀಡುವ ನವರಾತ್ರಿಯ ವೈಭವವನ್ನು ಸಾರುವ, ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಎತ್ತಿ ತೋರುವ ಹೊತ್ತಗೆ. ದಸರಾ ಪರಂಪರೆಯ ಇತಿಹಾಸವನ್ನು ಸಂಗ್ರಹಿಸಿ, ದಾಖಲಿಸಿ ಸಂರಕ್ಷಿಸಿದ ಹೆಗ್ಗಳಿಕೆಗೆ ಪಾತ್ರವಾದ ಈ ಪುಸ್ತಕ ದೇವಾನು ದೇವತೆಗಳ ಬಗೆಗಿನ ಜನರ ನಂಬಿಕೆ ಭಾವನೆಗಳನ್ನು ಪ್ರತಿಬಿಂಬಿಸುವ ಐತಿಹಾಸಿಕ ದಾಖಲೆ. ಮಡಿಕೇರಿ ಜನೋತ್ಸವ ದಸರಾದ ಬಗ್ಗೆ ತಿಳಿದುಕೊಳ್ಳಬೇಕೆಂಬವರಿಗೆ ಮಾಹಿತಿಭರಿತ ಕೃತಿಯಷ್ಟೇ ಅಲ್ಲ, ಪೀಳಿಗೆಯಿಂದ ಪೀಳಿಗೆಗೆ ಸಂಸ್ಕೃತಿಯ ಸಾರವನ್ನು ಕೊಂಡೊಯ್ಯಬಲ್ಲ ವಾಹಕ ಕೂಡ.
ಲಿಖಿತ ರೂಪದ ದಾಖಲೆ:
ಲಿಖಿತ ರೂಪದಲ್ಲಿ ದಾಖಲೆಗೊಳ್ಳದ ಯಾವುದೇ ವಿಚಾರಗಳು ಕಾಲವೆಂಬ ಪ್ರವಾಹದಲ್ಲಿ ತಮ್ಮ ನೈಜತೆಯನ್ನು ಕಳೆದುಕೊಳ್ಳುತ್ತವೆ ಎನ್ನುವ ಮಾತು ಸಾಂಸ್ಕೃತಿಕ ಪರಂಪರೆಗೆ ಹೊರತಲ್ಲ. ಮಡಿಕೇರಿಯ ಐತಿಹಾಸಿಕ ದಸರಾ ಹಬ್ಬದ ವಿಚಾರಗಳು ಎಲ್ಲೂ ದಾಖಲೆ ರೂಪವನ್ನು ಪಡೆದಿರಲಿಲ್ಲ. ಈ ಕೊರತೆಯನ್ನು ನೀಗಿಸಲು ಪಣ ತೊಟ್ಟ ಅನಿಲ್ ಅವರು ಇದೀಗ ಐತಿಹಾಸಿಕ ದಾಖಲೆಯನ್ನೇ ಮಾಡಿದ್ದಾರೆ. ದಸರಾದ ಚಾರಿತ್ರಿಕ ಹಿನ್ನೆಲೆಯನ್ನು ಅದು ಆರಂಭಗೊಂಡ ಹಂತದಿಂದ ಪ್ರಾರಂಭಿಸಿ ಅದು ಸಾಗಿ ಬಂದ ರೀತಿಯನ್ನು ಎಳೆ ಎಳೆಯಾಗಿ ಸ್ಪಷ್ಟವಾಗಿ ಚಿತ್ರಿಸಿದ್ದಾರೆ. ಒಂದು ನಾಡಿನ ಹಬ್ಬ ಅದು ಜನೋತ್ಸವ ಎನಿಸಬೇಕಾದರೆ ಎಷ್ಟೊಂದು ಮನಸುಗಳ ಅವಿರತ ಶ್ರಮವಿರುತ್ತದೆ ಎನ್ನುವುದನ್ನು ಲೇಖಕರು ಚಿತ್ರಿಸಿದ ರೀತಿಯಲ್ಲಿಯೇ ಮಡಿಕೇರಿ ದಸರಾ ಜನೋತ್ಸವ ಅದೊಂದು ‘ಸಾರ್ವಜನಿಕ ಹಬ್ಬ’ ಎನ್ನುವ ಸಾರ ಅಡಕವಾಗಿದೆ. ದಸರಾ ಹಬ್ಬವನ್ನು ಹುಟ್ಟು ಹಾಕಿದ ರಾಜವಂಶಗಳ ಚರಿತ್ರೆ, ಆನೆ-ಅಂಬಾರಿಗಳ ಮೂಲಕ ನಡೆಯುತ್ತಿದ್ದ ಮೆರವಣಿಗೆ ದಶ ಮಂಟಪಗಳ ಶೋಭಾಯಾತ್ರೆಯಾಗಿ ಬೆಳೆದು ಬಂದ ಪರಿ, ನವರಾತ್ರಿಯ ಪೂಜೆ, ಉಪಾಸನಾ ವಿಧಿ ವಿಧಾನ, ಮಡಿಕೇರಿಯ ಶಕ್ತಿ ದೇವತೆಗಳ ಆರಾಧನೆ ಮತ್ತು ಅದರೊಂದಿಗೆ ಬೆಸೆದುಕೊಂಡಿರುವ ಶ್ರದ್ಧೆ-ನಂಬಿಕೆಗಳು, ಅನುಸರಿಸಿಕೊಂಡು ಬಂದ ಸಂಪ್ರದಾಯಗಳು ಎಲ್ಲವೂ ಈ ಕೃತಿಯಲ್ಲಿ ಸವಿವರವಾಗಿ ದಾಖಲುಗೊಂಡಿದೆ.
ಅಪ್ರತಿಮ ವೀರಯೋಧರನ್ನು ದೇಶಕ್ಕೆ ನೀಡಿದ ಕೊಡಗಿನ ಭೂಮಿ ಮಹಾಯುದ್ಧದ ಸಮಯದಲ್ಲಾಗಲೀ, ರಾಜಕೀಯ ಅಸ್ಥಿರತೆಯ ಸಂದರ್ಭದಲ್ಲಾಗಲೀ, ರೋಗ-ರುಜಿನಗಳ ಭಯ-ಭೀತಿಯಿಂದ ಜನತೆ ತತ್ತರಿಸಿ ಹೋಗಿದ್ದ ವಿಷಮ ಪರಿಸ್ಥಿತಿಯಲ್ಲಾಗಲೀ, ತನ್ನ ಒಡಲಲ್ಲಿ ತುಂಬಿಕೊಂಡಿದ್ದ ಚರಿತ್ರೆ, ಸಂಸ್ಕೃತಿ, ಧಾರ್ಮಿಕ ಶ್ರದ್ಧೆಗೆ ಊನ ಬರದಂತೆ ಸಂಪ್ರದಾಯಬದ್ಧವಾಗಿ ಕಾಯ್ದುಕೊಂಡು ಬಂದ ರೀತಿಯನ್ನು ಈ ಕೃತಿ ಚೊಕ್ಕವಾಗಿ ಅನಾವರಣಗೊಳಿಸಿದೆ.
ಯಾರನ್ನೂ.. ಯಾವುದನ್ನೂ ಅಲ್ಲಗಳೆದಿಲ್ಲ:
ಮಾರಕ ರೋಗಗಳಿಂದ ನಾಡನ್ನು ಸಂರಕ್ಷಿಸಿ ಜನತೆಗೆ ಅಭಯ ನೀಡುವ ಶಕ್ತಿ ದೇವತೆಗಳ ಕರಗದ ಮಹತ್ವವನ್ನು ದಾಖಲಿಸುವ ಲೇಖಕ ವ್ರತನಿಷ್ಠರಾಗಿ ಕರಗವನ್ನು ಹೊತ್ತು ನಗರ ಪ್ರದಕ್ಷಿಣೆ ಮಾಡುತ್ತಾ, ಸಕಲರಿಗೆ ಲೇಸನ್ನು ಬಯಸುವ ಕರಗಧಾರಿಗಳ ದೈವಿಕ ಕೈಂಕರ್ಯದ ಬಗೆಗೂ ಹೇಳಲು ಮರೆತಿಲ್ಲ. ಮಡಿಕೇರಿ ದಸರಾವನ್ನು ಆರಂಭಿಸಿದ ರಜಪೂತ ರಾಜವಂಶದವರ ಬಗ್ಗೆ ಹೇಳುವಾಗ ಅಲ್ಲಿಂದ ಇಲ್ಲಿಯವರೆಗೆ ದಸರಾ ಜನೋತ್ಸವದ ಜವಾಬ್ದಾರಿ ಹೊತ್ತವರನ್ನು, ಅಹರ್ನಿಶಿ ಶ್ರಮಿಸಿದವರನ್ನು ಯಾರೊಬ್ಬರನ್ನೂ ಅಲ್ಲಗಳೆದಿಲ್ಲ. ದಶ ಮಂಟಪಗಳ ವೈಭವವನ್ನು ವರ್ಣಿಸುವ ಭರದಲ್ಲಿ ‘ಮಂಟಪ ‘ ಎನ್ನುವ ಪರಿಕಲ್ಪನೆಯನ್ನು ಜಾರಿಗೊಳಿಸಿದ ಹಿರಿಯರನ್ನು, ಹಂತ ಹಂತವಾಗಿ ಮಂಟಪ ಬೆಳೆದು ಬಂದು ಇಂದಿನ ವೈಭವದ ಘಟ್ಟಕ್ಕೆ ತಲುಪಲು ಸಹಕಾರ ನೀಡಿದ ಸಮಾಜಮುಖೀ ಚಿಂತಕರ ಕಾರ್ಯ ತತ್ಪರತೆಯನ್ನು ಬಿಂಬಿಸಲು ಮರೆತಿಲ್ಲ. ನವರಾತ್ರಿಯ ಪ್ರಮುಖ ಆಕರ್ಷಣೆಯಾದ ಗೊಂಬೆ ಪೂಜೆಯ ಬಗ್ಗೆ ಹೇಳುತ್ತಾ ಶ್ರದ್ಧಾ ಭಕ್ತಿಯಿಂದ ಗೊಂಬೆ ಕೂರಿಸುವ ಮನೆಗಳ ಹೆಣ್ಣುಮಕ್ಕಳ ಲವಲವಿಕೆ, ಗೊಂಬೆ ಕೂರಿಸುವ ವಿಧಿ ವಿಧಾನಗಳಲ್ಲಿ ಅವರು ತೋರುವ ಆಸ್ಥೆ ಇತ್ಯಾದಿಗಳನ್ನು ಸಶಕ್ತವಾಗಿ ಬಿಂಬಿಸಿದ್ದಾರೆ. ಇದು ಈ ಕೃತಿಯ ವಿಶೇಷತೆ. ಐದು ರೂಪಾಯಿಗೆ ದಸರಾ ನೋಡಿ ಆನಂದಿಸಿದವನ ಕಥೆಯನ್ನೂ ಸಾದರಪಡಿಸುವ ಲೇಖಕ ಮಡಿಕೇರಿ ದಸರಾ ಜನ ಸಾಮಾನ್ಯರೆಲ್ಲರೂ ಸಂಭ್ರಮಿಸುವ ಹಬ್ಬ ಎಂಬುದನ್ನು ಸ್ಪಷ್ಟವಾಗಿ ಚಿತ್ರಿಸಿದ್ದಾರೆ. ಸರ್ವ ಧರ್ಮಗಳ ಸಾಮರಸ್ಯ ಸಾರುವ ದಸರಾ ಹಬ್ಬದ ವಿಶೇಷತೆಯನ್ನು ಚೊಕ್ಕವಾಗಿ ಉಲ್ಲೇಖಿಸಿದ್ದಾರೆ.
ಸಚಿತ್ರ ಹೊತ್ತಗೆ:
‘ಸಾವಿರ ಪದಗಳು ಸಾದರಪಡಿಸುವ ಕಥಾ ಹಂದರವನ್ನು ಒಂದೇ ಚಿತ್ರ ಕಣ್ಣಿಗೆ ಕಟ್ಟುವಂತೆ ಬಿಂಬಿಸಬಲ್ಲುದು’ ಎಂಬ ಮಾತು ಈ ಪುಸ್ತಕವನ್ನು ತೆರೆದ ಮಾತ್ರಕ್ಕೇ ವೇದ್ಯವಾಗುವ ಸತ್ಯ. ಈ ಕೃತಿಯಲ್ಲಿರುವ ಕಣ್ಮನ ಸೆಳೆಯುವ ಚಿತ್ರ ಪಟಗಳು ದಸರಾ ವೈಭವವನ್ನು ಸಾರಿ ಹೇಳಬಲ್ಲ ಅಪೂರ್ವ ಆಕರಗಳು. ಇವುಗಳನ್ನು ಸಂಗ್ರಹಿಸುವಲ್ಲಿ ಲೇಖಕ ಪಟ್ಟಿರಬಹುದಾದ ಶ್ರಮ, ಅವುಗಳನ್ನು ಒಪ್ಪ-ಓರಣವಾಗಿ ಹೊಂದಿಸಿರುವ ರೀತಿ ಎಲ್ಲವೂ ಕೃತಿಕಾರನ ಕ್ರಿಯಾಶೀಲತೆಗೆ ಹಿಡಿದ ಕೈಗನ್ನಡಿ. ಅಂತೆಯೇ ಪುಸ್ತಕದ ಪುಟಗಳನ್ನು ತೆರೆವ ಆಸಕ್ತರು ದಸರಾದ ಸಾರಸತ್ವವನ್ನು ಆಸ್ವಾದಿಸಲಿ ಎನ್ನುವ ಬರಹಗಾರನ ಮನೋಭಿಲಾಷೆ ಕೂಡ.
ಸಂಸ್ಕೃತಿ ಬಗೆದಷ್ಟೂ ಆಳ, ಮೊಗೆದಷ್ಟೂ ಒರತೆ:
ಸಂಸ್ಕೃತಿ ಎನ್ನುವುದು ಒಂದು ಸಾಗರ. ಸಾಗರದ ನೀರನ್ನು ಬೊಗಸೆಯಲ್ಲಿ ಕುಡಿದು ಮುಗಿಸಲು ಸಾಧ್ಯವಿಲ್ಲ. ಆದ್ದರಿಂದ ಲೇಖಕರೇ ಹೇಳುವಂತೆ ವಿಸ್ತಾರವಾದ ಇತಿಹಾಸವನ್ನು ಹೊಂದಿದ ಮಡಿಕೇರಿ ದಸರಾದ ಪರಿಪೂರ್ಣ ಚಿತ್ರಣ ಈ ಕೃತಿಯಲ್ಲಿದೆ ಎಂದು ಹೇಳಿದರೆ ತಪ್ಪಾಗಬಹುದು. ಅನುಭವದ ಗಳಿಕೆಗೂ, ಸಂಗ್ರಹದ ಪರಿಧಿಗೂ ಒಂದು ಮಿತಿಯುಂಟು ಎನ್ನುವ ಚಿಂತನೆ ಈ ಕೃತಿಯನ್ನು ಓದುವ ಪ್ರತಿಯೊಬ್ಬರಿಗೂ ಬೇಕು.
ಒಟ್ಟಿನಲ್ಲಿ ದಸರಾ ಎನ್ನುವ ಪದದ ಅರ್ಥವನ್ನೇ ಗ್ರಹಿಸಲು ಸುಲಭಸಾಧ್ಯವಲ್ಲದ ಈ ಕಾಲಘಟ್ಟದಲ್ಲಿ ನಾಡಿನ ಭವ್ಯ ಪರಂಪರೆಯನ್ನು ಸಾರುವ, ಮಡಿಕೇರಿ ಎನ್ನುವ ಪದದೊಡನೆಯೇ ಬೆಸೆದು ಹೋಗಿರುವ ನಾಡಹಬ್ಬದ ಸಂಪೂರ್ಣ ಮಾಹಿತಿಗಳನ್ನು ಶ್ರುತಿ ಮೂಲಗಳಿಂದಷ್ಟೇ ತಿಳಿದುಕೊಳ್ಳುವುದಾಗಲೀ, ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವುದಾಗಲೀ ಅಸಾಧ್ಯದ ಮಾತಾಗಿರುವಾಗ, ಮಡಿಕೇರಿಯಲ್ಲೇ ನೆಲೆಸಿರುವ ಅನೇಕರಿಗೆ ದಸರಾ ಎಂದರೆ ಒಂದು ಸಾಂಸ್ಕೃತಿಕ ಹಬ್ಬ, ದಶ ಮಂಟಪಗಳ ಶೋಭಾಯಾತ್ರೆ ಎಂಬಷ್ಟೇ ಕಲ್ಪನೆಗಳು ಮನೆ ಮಾಡಿಕೊಂಡಿರುವಾಗ ಈ ಹಬ್ಬ ತನ್ನ ಒಡಲೊಳಗೆ ಹುಡುಗಿಸಿಕೊಂಡಿರುವ ಅಸಂಖ್ಯ ನಂಬಿಕೆ ಸಂಪ್ರದಾಯ ಸಂಸ್ಕೃತಿಯನ್ನು ದಾಖಲಿಸಿ, ಪೀಳಿಗೆಯಿಂದ ಪೀಳಿಗೆಗೆ ಈ ಸಂಸ್ಕೃತಿಯ ಸೊಗಡನ್ನು ಒಯ್ಯುವಲ್ಲಿ ಈ ಕೃತಿ ಪ್ರಮುಖ ಪಾತ್ರ ವಹಿಸಬಲ್ಲುದು ಎನ್ನುವಲ್ಲಿ ಇದರ ಸಾರ್ಥಕತೆ ಅಡಕವಾಗಿದೆ.