ಪ್ರಜಾಸ್ತ್ರ ಸುದ್ದಿ
ದುಬೈ(Dubai): ಮಹಿಳಾ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ಭಾರತ ತನ್ನ 2ನೇ ಪಂದ್ಯವನ್ನು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಡಿ 6 ವಿಕೆಟ್ ಗಳ ಅಂತರದಿಂದ ಗೆಲುವು ದಾಖಲಿಸಿತು. ಈ ಮೂಲಕ ಗೆಲುವಿನ ಖಾತೆಯನ್ನು ತೆರೆದಿದೆ. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿತ್ತು. ಹೀಗಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆಯಾಗಿತ್ತು.
ಟಾಸ್ ಗೆದ್ದ ಪಾಕ್ ನಾಯಕಿ ಫಾತಿಮಾ ಸನಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಭಾರತದ ಬೌಲರ್ ರೇಣುಕಾ ಸಿಂಗ್ ಮೊದಲ ಓವರ್ ನಲ್ಲಿ ಗುಲ್ ಫೆರೋಜಾ ವಿಕೆಟ್ ಪಡೆಯುವ ಮೂಲಕ ಆಘಾತ ನೀಡಿದರು. ಮುಂದೆ ಬಂದ ಆಟಗಾರ್ತಿಯರು ಸಹ ಹೀಗೆ ಬಂದು ಹಾಗೇ ಹೋದರು. ನಿದಾ ದರ್ 28 ರನ್ ಮುನೀಬಾ ಅಲಿ 17, ನಾಯಕಿ ಫಾತಿಮಾ 13 ಹಾಗೂ ಸೈದಾ ಅರೂಬ್ ಶಾ 14 ರನ್ ಬಾರಿಸಿದರು. ಇದರೊಂದಿಗೆ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 105 ರನ್ ಮಾತ್ರ ಗಳಿಸಿತು. ಭಾರತ ಪರ ಅರುಂಧತ ರೆಡ್ಡಿ 3, ಕನ್ನಡತಿ ಶ್ರೇಯಾಂಕಾ ಪಾಟೀಲ 2, ರೇಣುಕಾ ಸಿಂಗ್, ದೀಪ್ತಿ ಶರ್ಮಾ, ಆಶಾ ಶೋಬನ ತಲಾ 1 ವಿಕೆಟ್ ಪಡೆದರು.
106 ರನ್ ಗಳ ಅಲ್ಪ ಗುರಿಯನ್ನು ಬೆನ್ನು ಹತ್ತಿರದ ಹರ್ಮನ್ ಪ್ರೀತ್ ಕೌರ್ ಪಡೆ 18.5 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿ ಗೆಲುವಿನ ಗೆರೆ ದಾಟಿತು. ಶಫಾಲಿ ವರ್ಮಾ 32, ಜೆಮಿಯಾ 23, ನಾಯಕಿ ಕೌರ್ 29 ರನ್ ಗಳಿಸಿದರು. ಸ್ಮೃತಿ ಮಂದಾನ 7 ರನ್ ಗಳಿಸಿ ಮತ್ತೆ ವಿಫಲರಾದರು. ರಿಚಾ ಘೋಷ್ 0 ಸುತ್ತಿದರು. ದೀಪ್ತಿ ಶರ್ಮಾ ಅಜೇಯ 7 ಹಾಗೂ ಸಂಜೀವನಾ ಸಜನಾ ಅಜೇಯ 4 ರನ್ ಗಳಿಸಿದರು. ಪಾಕ್ ಪರ ನಾಯಕಿ ಫಾತಿಮಾ 2, ಸದಿಯಾ ಇಕ್ಬಾಲ್ ಓಮಿಮಾ ಸೊಹಿಲ್ ತಲಾ 1 ವಿಕೆಟ್ ಪಡೆದರು. ಅರುಂಧತಿ ರೆಡ್ಡಿ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.